ರಿಪ್ಪನ್‌ಪೇಟೆ : ತೀರ್ಥಹಳ್ಳಿಯ ಕುಡುಮಲ್ಲಿಗೆ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮದನ್ ಅವರು ದಿಢೀರ್ ನಾಪತ್ತೆಯಾಗಿದ್ದು, ಅವರ ಕಾರು ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬಳ್ಳಿ ಸಮೀಪದ ದಟ್ಟ ಕಾಡಿನಲ್ಲಿ ಅನಾಥವಾಗಿ ಪತ್ತೆಯಾಗಿದೆ. ಈ ಘಟನೆ ಇದೀಗ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಕಾರಿನಲ್ಲಿ ಸಿಕ್ಕ ಮಹತ್ವದ ದಾಖಲೆಗಳು !
ನಿರ್ಜನ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಮದನ್ ಅವರ ಮಾರುತಿ ಸ್ವಿಫ್ಟ್ ಕಾರಿನಲ್ಲೇ ಕೀ ಬಿಡಲಾಗಿದೆ. ವಿಶೇಷವೆಂದರೆ, ಕಾರಿನೊಳಗೆ ಅವರ ಮೊಬೈಲ್ ಫೋನ್ ಹಾಗೂ ಸೊಸೈಟಿಗೆ ಸಂಬಂಧಿಸಿದ ಪ್ರಮುಖ ಲೆಕ್ಕಪತ್ರಗಳು (Ledger books) ಸಿಕ್ಕಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿದೆ.
ಭ್ರಷ್ಟಾಚಾರದ ಆರೋಪದ ಹಿನ್ನೆಲೆ:
ಇತ್ತೀಚೆಗಷ್ಟೇ ಕುಡುಮಲ್ಲಿಗೆ ಸೊಸೈಟಿಯಲ್ಲಿ ದೊಡ್ಡ ಮಟ್ಟದ ಆರ್ಥಿಕ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ, ಶುಕ್ರವಾರ ತೀರ್ಥಹಳ್ಳಿಯ ತಮ್ಮ ಮನೆಯಿಂದ ಹೊರಟಿದ್ದ ಸಿಇಒ ಮದನ್ ನಾಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಪಲಾಯನವೋ ಅಥವಾ ಅನಾಹುತವೋ?
ಸೊಸೈಟಿಯ ಹಗರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗುವ ಭೀತಿಯಿಂದ ಮದನ್ ಅವರು ತಲೆಮರೆಸಿಕೊಂಡಿದ್ದಾರೆಯೇ? ಅಥವಾ ಪ್ರಕರಣದ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿ ಕಾಡಿನಲ್ಲಿ ಏನಾದರೂ ವಿಪರೀತ ನಿರ್ಧಾರ ತೆಗೆದುಕೊಂಡಿದ್ದಾರೆಯೇ? ಎಂಬ ಪ್ರಶ್ನೆಗಳು ಕುಟುಂಬಸ್ಥರನ್ನು ಹಾಗೂ ಪೊಲೀಸರನ್ನು ಕಾಡುತ್ತಿವೆ.
ಮುಂದುವರಿದ ಹುಡುಕಾಟ :
ಕಾರು ಪತ್ತೆಯಾದ ಜಂಬಳ್ಳಿ ಅರಣ್ಯ ಪ್ರದೇಶದ ಸುತ್ತಮುತ್ತ ಮದನ್ ಅವರ ಕುಟುಂಬದವರು, ಸ್ಥಳೀಯರು ಹಾಗೂ ಸಾರ್ವಜನಿಕರು ಆತಂಕದಿಂದ ಹುಡುಕಾಟ ಮುಂದುವರಿಸಿದ್ದಾರೆ. ಪೊಲೀಸರು ಈ ನಿಗೂಢ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಮದನ್ ಅವರು ಸಿಕ್ಕ ಬಳಿಕವಷ್ಟೇ ಈ ಹೈಡ್ರಾಮಾದ ಹಿಂದಿನ ಅಸಲಿ ಕಾರಣ ಜಗಜ್ಜಾಹೀರಾಗಬೇಕಿದೆ.

