HOSANAGARA | ಕಕ್ಷಿದಾರರರೊಬ್ಬರು ನ್ಯಾಯಾಲಯಕ್ಕೆ ಹಾಜರಾದಾಗ ಕಾರಣ ಕಕ್ಷಿದಾರರ ಪರ ವಕೀಲರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವಂತೆ ಆದೇಶಿಸಿದ್ದ ಬಾದಾಮಿ ನ್ಯಾಯಾಲಯದ ನ್ಯಾಯಾಧೀಶರ ವರ್ತನೆಯನ್ನು ವಿರೋಧಿಸಿ ಇಲ್ಲಿನ ನ್ಯಾಯಾಲಯದ ಕಲಾಪಗಳಿಂದ ವಕೀಲರು ಹೊರಗುಳಿದರು.
ಈ ವೇಳೆ ಹಿರಿಯ ವಕೀಲ ಕೆ.ಬಿ.ಪ್ರಶಾಂತ್ ಮಾತನಾಡಿ, ಯಾವುದೇ ನ್ಯಾಯಾಲಯದಲ್ಲಿ ಬೆಂಚ್ ಹಾಗೂ ಬಾರ್ ಕೌನ್ಸಿಲ್ ನಡುವೆ ಉತ್ತಮ ಬಾಂಧವ್ಯವಿದ್ದಲ್ಲಿ ಮಾತ್ರ ಕಲಾಪಗಳು ಸುಸೂತ್ರವಾಗಿ ನಡೆಯುತ್ತವೆ. ವಾಹನದ ಎರಡೂ ಚಕ್ರಗಳಂತೆ ಕಾರ್ಯನಿರ್ವಹಿಸುವ ಇವು ಹೊಂದಾಣಿಕೆ ತಪ್ಪಿದಲ್ಲಿ, ನ್ಯಾಯಾಲಯದ ವಾತಾವರಣ ಕೆಡುತ್ತದೆ. ಯಾರೇ ಆಗಲಿ ತಮ್ಮ ಅಧಿಕಾರದ ಮದದಿಂದ ವರ್ತಿಸಬಾರದು. ಪ್ರಸ್ತುತ ಪ್ರಕರಣದಲ್ಲಿ ಕಕ್ಷಿದಾರರು ಹಾಜರಾಗಿಲ್ಲ ಎಂಬ ಕಾರಣಕ್ಕೆ ನ್ಯಾಯಾಧೀಶರು ವಕೀಲರನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಆದರೆ ಇದು ಕಾನೂನು ಬಾಹಿರವಾಗಿದೆ. ಕಾನೂನನ್ನು ಎಲ್ಲರೂ ಗೌರವಿಸಬೇಕು. ಅಲ್ಲಿ ನಡೆದ ಘಟನೆಗೆ ವಿರೋಧ ವ್ಯಕ್ತಪಡಿಸಿದ್ದೇವೆ. ಈ ಕಾರಣದಿಂದ ಒಂದು ದಿನದ ಮಟ್ಟಿಗೆ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿಯಲು ತೀರ್ಮಾನಿಸಲಾಗಿದೆ ಎಂದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ವಕೀಲರಾದ ವಾಲೇಮನೆ ಶಿವಕುಮಾರ್, ಷಣ್ಮುಖಪ್ಪ, ಈರಪ್ಪ, ಉಮೇಶ್ ಗುಬ್ಬಿಗ, ವಿಜಯ್, ವೈ.ಪಿ.ಮಹೇಶ್, ಗುರುಕಿರಣ್, ಮಂಡಾನಿ ಗುರು, ಗಗ್ಗ ಬಸವರಾಜ್, ಕರ್ಣಕುಮಾರ್, ಮುಕುಂದಚಂದ್ರ ಮತ್ತಿತರ ವಕೀಲರು ಇದ್ದರು.