ರಿಪ್ಪನ್‌ಪೇಟೆ ; ಸರ್ಕಾರದಿಂದ ಬಂದಂತಹ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಕೋಟೆತಾರಿಗ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಲತಾ ಹೇಳಿದರು.
ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಚಿಕ್ಕಜೇನಿ ಇವರ ವಿಶೇಷ ಅನುದಾನದಲ್ಲಿ 5 ಲಕ್ಷ ರೂ. ಮೊತ್ತದ ಹೈಟೆಕ್ ಶೌಚಾಲಯ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರ ವಿಶೇಷ ಕಾಳಜಿಯಿಂದ ಮಂಜೂರಾದ ಈ ಹೈಟೆಕ್ ಶೌಚಾಲಯವನ್ನು ವಿದ್ಯಾರ್ಥಿಗಳಿಗೆ ಬಳಕೆಗೆ ಅನುಕೂಲವಾಗಲಿ ಎಂದು ಹೇಳಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸರ್ಕಾರಗಳು ಪ್ರೋತ್ಸಾಹ ನೀಡಿದಾಗ ಸರ್ಕಾರಿ ಶಾಲೆಗಳು ಬೆಳೆಯಲು ಸಾಧ್ಯ ಎಂದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಅರುಣಾಚಲ ಮಾತನಾಡಿ, ಪಕ್ಷ ಭೇದ ಮರೆತು ಊರಿನ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಮುಂದಿನ ಮಕ್ಕಳ ಹಾಗೂ ಎಲ್ಲಾ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಈ ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಸದಸ್ಯರು ಹಾಗೂ ಪ್ರಭಾರಿ ಮುಖ್ಯ ಶಿಕ್ಷಕ ಮಹೇಶಾಚಾರಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜನಾರ್ದನ್ ಗೌಡ, ಕುಬೇರಪ್ಪ ಗೌಡ, ಶಾಲೆಯ ಹಳೆಯ ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.
ಗುದ್ದಲಿ ಪೂಜೆಗೆ ಅಡ್ಡಿಪಡಿಸಿದ ಪ್ರಮುಖರು :
ಶಾಲಾ ಹೈಟೆಕ್ ಶೌಚಾಲಯದ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ವೇದಮೂರ್ತಿ, ಗುರುಪ್ರಸಾದ್, ಮಹೇಶ್ ಕಬ್ಬು, ರಶಿಕ್ ಇನ್ನು ಮುಂತಾದವರು ಯಾವ ಅನುದಾನದಲ್ಲಿ ಶೌಚಾಲಯ ನಿರ್ಮಿಸುತ್ತಿದ್ದೀರಿ? ಶಾಸಕರನ್ನ ಪರಿಗಣಿಸಿಲ್ಲ ಎಂದು ಎಂದು ಆರೋಪಿಸಿ ಗದ್ದಲ ಎಬ್ಬಿಸಿ ಶಾಸಕರನ್ನು ಪರಿಗಣಿಸಬೇಕಿತ್ತು ಎಂದು ಆರೋಪಿಸಿದರು. ಶಾಸಕರನ್ನ ಪರಿಗಣಿಸಿ ಶಿಷ್ಟಾಚಾರ ಪ್ರಕಾರವಾಗಿ ನಡೆದುಕೊಂಡಿದ್ದೇವೆ ಎಂದು ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರು ಹೇಳಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





