ಶಿವಮೊಗ್ಗ: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಆದರೆ ಸಭೆಗೂ ಮೊದಲು ರಾಜ್ಯದ 10 ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶದ ವಾಸ್ತವ ಸ್ಥಿತಿಗತಿ ತಿಳಿಯಲು ಜಂಟಿ ಸರ್ವೇ ನಡೆಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದರು.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ಬಿಡುಗಡೆಯಾಗಿರುವುದರಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ ಜನರಲ್ಲಿ ಆತಂಕ ಹೆಚ್ಚಾಗಿದೆ. ವಿಶೇಷವಾಗಿ ಕರ್ನಾಟಕದ ಮಲೆನಾಡು ಭಾಗದ ರೈತರು ಮತ್ತು ಕೂಲಿ ಕಾರ್ಮಿಕರು ಭಯಭೀತರಾಗಿದ್ದಾರೆ ಎಂದರು.
ಈ ಕರಡು ಅಧಿಸೂಚನೆಯ ಪ್ರಕಾರ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಳಗಾವಿ ಜಿಲ್ಲೆಗಳ ಒಟ್ಟು 1,439 ಗ್ರಾಮಗಳು ವರದಿ ವ್ಯಾಪ್ತಿಗೆ ಬರುತ್ತಿವೆ. ಶಿವಮೊಗ್ಗ ಜಿಲ್ಲೆಯ 146 ಗ್ರಾಮಗಳು, ಚಿಕ್ಕಮಗಳೂರಿನ 137, ಕೊಡಗಿನ 53, ಉತ್ತರ ಕನ್ನಡದ 566 ಗ್ರಾಮಗಳು ಸೇರಿದಂತೆ ಹಲವು ಪ್ರದೇಶಗಳ ಜನರ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಪಶ್ಚಿಮ ಘಟ್ಟದ ವ್ಯಾಪ್ತಿಯ 20,668 ಚದರ ಕಿ.ಮೀ ಪ್ರದೇಶ ವರದಿ ಚರ್ಚೆಗೆ ಸಂಬಂಧಿಸಿದೆ. ಮಹಾರಾಷ್ಟ್ರದಲ್ಲಿ 17,360 ಚದರ ಕಿ.ಮೀ ಪ್ರದೇಶವಿದ್ದು, ನಂತರ ಕೇರಳ, ತಮಿಳುನಾಡು, ಗೋವಾ ಸೇರಿದಂತೆ ಇತರೆ ರಾಜ್ಯಗಳಿವೆ. ಆದರೆ ವರದಿ ಜಾರಿಯಾದರೆ ಹೆಚ್ಚಿನ ಹೊಡೆತ ಕರ್ನಾಟಕದ ಮಲೆನಾಡು ಭಾಗದ ಜನರಿಗೆ ತಗುಲಲಿದೆ ಎಂದು ರಾಘವೇಂದ್ರ ಹೇಳಿದರು.
ಕಸ್ತೂರಿ ರಂಗನ್ ವರದಿಯ ವಿವಿಧ ಕರಡುಗಳು ಬೇರೆ ಬೇರೆ ಸರ್ಕಾರಗಳ ಅವಧಿಯಲ್ಲಿ ಬಂದಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೂ ಕರಡುಗಳು ಬಂದಿದ್ದವು. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗಲೂ ಈ ವಿಚಾರ ಎದುರಾಯಿತು. ಆಗಲೂ ಜನರ ಪರವಾಗಿ ವರದಿಯನ್ನು ವಿರೋಧಿಸಿ ಕೇಂದ್ರಕ್ಕೆ ರಾಜ್ಯದ ನಿಲುವು ತಿಳಿಸಲಾಗಿತ್ತು ಎಂದರು.
ಯಡಿಯೂರಪ್ಪ ಅವರು 20,668 ಚದರ ಕಿ.ಮೀ ಪ್ರದೇಶದ ಪೈಕಿ 16,600 ಚದರ ಕಿ.ಮೀ ಭಾಗವನ್ನು ವನ್ಯಜೀವಿ ಧಾಮ ಹಾಗೂ ಅರಣ್ಯ ಪ್ರದೇಶವೆಂದು ಪರಿಗಣಿಸಿ, ಉಳಿದ ಪ್ರದೇಶವನ್ನು ಅರಣ್ಯೇತರ ಜಾಗವೆಂದು ಗುರುತಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ರಾಘವೇಂದ್ರ ವಿವರಿಸಿದರು.
ಉಪಮುಖ್ಯಮಂತ್ರಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಆದರೆ ಇಂತಹ ಸೂಕ್ಷ್ಮ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಾವು ರೈತ ವಿರೋಧಿಗಳಾಗಿದ್ದರೆ ಹಿಂದಿನ ಕರಡು ವರದಿಯನ್ನೇ ಜಾರಿಗೆ ತರಲು ಅವಕಾಶ ಕೊಡಬಹುದಿತ್ತು. ಆದರೆ ನಮ್ಮ ಪಕ್ಷಕ್ಕೆ ಅಂತಹ ಉದ್ದೇಶ ಇಲ್ಲ. ರೈತರ ಬದುಕು ನಮಗೆ ಮುಖ್ಯ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಕೂಡಲೇ 10 ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಸ್ಪಷ್ಟ ಸೂಚನೆ ನೀಡಬೇಕು. ಕಂದಾಯ, ಅರಣ್ಯ, ಗ್ರಾಮ ಆಡಳಿತ, ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡು ಸ್ಥಳಮಟ್ಟದಲ್ಲಿ ಜಂಟಿ ಸರ್ವೇ ನಡೆಸಬೇಕು. ಸ್ಯಾಟಲೈಟ್ ಚಿತ್ರಗಳ ಆಧಾರದ ಮೇಲೆ ಮಾತ್ರ ರೈತರ ಜಮೀನನ್ನು ಅರಣ್ಯವೆಂದು ಗುರುತಿಸುವುದು ಸರಿಯಲ್ಲ ಎಂದು ರಾಘವೇಂದ್ರ ಹೇಳಿದರು.
ಶೂನ್ಯ ಬಫರ್ ಜೋನ್ ಪರಿಕಲ್ಪನೆಯನ್ನು ಪರಿಗಣಿಸಿ, ವನ್ಯಜೀವಿ ಧಾಮ, ಅಭಯಾರಣ್ಯ ಮತ್ತು ಕಿರು ಅರಣ್ಯಗಳಿಗಷ್ಟೇ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಸೀಮಿತಗೊಳಿಸಬೇಕು. ನೋಟಿಫೈಡ್ ಅರಣ್ಯ ಬಿಟ್ಟು ಉಳಿದ ಎಲ್ಲ ಪ್ರದೇಶಗಳನ್ನು ಏಕಾಏಕಿ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಬಾರದು. ಈ ಸ್ಪಷ್ಟತೆ ಮುಂದಿನ ಕರಡು ಪ್ರತಿಯಲ್ಲಿ ಇರಬೇಕು ಎಂದು ಅವರು ಆಗ್ರಹಿಸಿದರು.
ಕಂದಾಯ, ಗ್ರಾಮ ಆಡಳಿತ ಮತ್ತು ಮುನ್ಸಿಪಲ್ ಕಾಯ್ದೆಗಳ ಅಡಿಯಲ್ಲಿ ರೈತರು ಹಾಗೂ ಅವರ ಭೂಮಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನು ಸರ್ಕಾರ ಖಚಿತಪಡಿಸಬೇಕು. ವರದಿ ಜಾರಿಯಾದರೆ ಒತ್ತುವರಿ, ಸಾಂಪ್ರದಾಯಿಕ ಕೃಷಿ, ಮನೆ ನಿರ್ಮಾಣ ಮತ್ತು ಜೀವನೋಪಾಯದ ಮೇಲೆ ಕಠಿಣ ನಿಯಂತ್ರಣ ಬರುತ್ತದೆ ಎಂಬ ಆತಂಕ ಜನರಲ್ಲಿ ಇದೆ ಎಂದು ಹೇಳಿದರು.
ಮಲೆನಾಡು ಭಾಗದಲ್ಲಿ ಈಗಾಗಲೇ ಡೀಮ್ಡ್ ಫಾರೆಸ್ಟ್, ಶರಾವತಿ ಸಂತ್ರಸ್ತರು, ಬಗರ್ ಹುಕುಂ ಜಮೀನು ಸೇರಿದಂತೆ ಹಲವು ಸಮಸ್ಯೆಗಳು ಬಗೆಹರಿಯದೆ ಉಳಿದಿವೆ. ರೈತರಿಗೆ ಸಿಗಬೇಕಾದ ಪರಿಹಾರ ಮತ್ತು ಸವಲತ್ತುಗಳು ಇನ್ನೂ ಪೂರ್ಣವಾಗಿ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಕಸ್ತೂರಿ ರಂಗನ್ ವರದಿ ಹೆಸರಿನಲ್ಲಿ ಹೊಸ ಸಮಸ್ಯೆ ಸೃಷ್ಟಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಜನರು ಮತ್ತು ಅರಣ್ಯ ನಡುವಿನ ನೈಜ ಸಂಬಂಧವನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಕಾಡು ಭಾಗದಲ್ಲಿ ಜೀವನ ಸಾಗಿಸುವವರು ಈಗಾಗಲೇ ಕಾಡುಪ್ರಾಣಿಗಳ ಹಾವಳಿ, ಭೂ ಸಮಸ್ಯೆ ಮತ್ತು ಕಾಯ್ದೆಗಳ ಒತ್ತಡದಿಂದ ಭದ್ರತೆ ಕಳೆದುಕೊಂಡಿದ್ದಾರೆ. ಕಾನೂನಿನ ಹೆಸರಿನಲ್ಲಿ ಜನರ ಮೇಲೆ ದಬ್ಬಾಳಿಕೆ ಮಾಡುವುದನ್ನು ಸಹಿಸುವುದಿಲ್ಲ ಎಂದು ರಾಘವೇಂದ್ರ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಬಿಜೆಪಿ ಪ್ರಭಾರಿ ಸಿದ್ಧರಾಮಣ್ಣ, ಮಾಜಿ ಶಾಸಕರಾದ ಅಶೋಕ್ ನಾಯ್ಕ, ಕೆ.ಜಿ. ಕುಮಾರಸ್ವಾಮಿ, ಮುಖಂಡರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಮೋಹನ್ ರೆಡ್ಡಿ, ಮಾಲತೇಶ್, ಸಿಂಗನಹಳ್ಳಿ ಸುರೇಶ್, ಗಿರೀಶ್ ಭದ್ರಾಪುರ, ಹರೀಸ್, ಚಂದ್ರಶೇಖರ್ ಎಸ್., ಮಂಜುನಾಥ್ ಎನ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.

