ರಿಪ್ಪನ್‌ಪೇಟೆ : ‘ಜೀವನದಲ್ಲಿ ಕರ್ಮಕ್ಷಯ ಮಾಡಲು ಧಾರ್ಮಿಕ ಭಕ್ತಿಭಾವ ಹೊಂದಿರಬೇಕು. ಕ್ರೋಧ, ಲೋಭ, ರಾಗಾದಿ ದ್ವೇಷಗಳನ್ನು ತ್ಯಜಿಸಿ ಕ್ಷಮಾಭಾವವುಳ್ಳವರಾಗಬೇಕು’ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಭಾದ್ರಪದ ಶುಕ್ಲಪಕ್ಷದ ಪಂಚಮಿಯಂದು ಪರ್ಯೂಷಣ ಪರ್ವದ ಆರಂಭದಂದು ಪ್ರವಚನದಲ್ಲಿ ತಿಳಿಸಿದರು.
ಕ್ಷಮಾ ಧರ್ಮದ ವಿಚಾರದಲ್ಲಿ ಪೂಜ್ಯ ಶ್ರೀಗಳವರು ಸಮತಾಭಾವದಿಂದ ಕ್ಲೇಶರಹಿತ ಜೀವನ ನಿರ್ವಹಣೆಯನ್ನು ಕಾಯಾ-ವಾಚಾ-ಮನಸಾ ರೂಢಿಸಿಕೊಂಡರೆ ಸಮ್ಯಕ್ತ್ವಭಾವ ಹೊಂದಲು ಸಾಧ್ಯವಿದೆ ಎಂದು ಜೈನ ಧರ್ಮದ ಮೂಲ ಸಿದ್ಧಾಂತಗಳ ಅವಲೋಕನ ಮಾಡಿ ಉತ್ತಮ ದಶಧರ್ಮಗಳ ಚಿಂತನೆ ಮಾಡಲು ತಿಳಿಸಿದರು.

ಶ್ರೀ ಮಹಾವೀರ ಸ್ವಾಮಿ ಆರಾಧನೆ ಮಾಡಿ ಭಕ್ತರು, ಶ್ರೀ ಪದ್ಮಾವತಿ ಮಹಿಳಾ ಸಂಘದ ಸದಸ್ಯರು, ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು ದಶಲಕ್ಷಣ ಪರ್ವದಲ್ಲಿ ಪಾಲ್ಗೊಂಡರು.
ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಯಕ್ಷಿ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ವಿಶೇಷ ಪೂಜಾ ವಿಧಿ-ವಿಧಾನಗಳು ನೆರವೇರಿತು.
ಮುಂದಿನ ಹತ್ತು ದಿನಗಳ ಪರ್ಯಂತ ನಿಯಮಾನುಸಾರ ಉಪವಾಸ, ಪೂಜೆ, ಸ್ವಾಧ್ಯಾಯ ಮಾಡುವ ಸಂಕಲ್ಪ ಮಾಡಿದರು.
ಶ್ರೀಗಳವರ ಪ್ರವಚನ ನಿತ್ಯವೂ ಆಯೋಜಿಸಲ್ಪಟ್ಟಿದೆ ಎಂದು ಹೊಂಬುಜ ಶ್ರೀಮಠದ ಪ್ರಕಟಣೆ ತಿಳಿಸಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.