ಹೊಂಬುಜ : ಜೈನಧರ್ಮದ 24ನೇ ತೀರ್ಥಂಕರರಾದ ಶ್ರೀ ಮಹಾವೀರ ತೀರ್ಥಂಕರರ 2625ನೇ ಜನ್ಮಕಲ್ಯಾಣ ಸುದಿನವನ್ನು ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಭಕ್ತಿಭಾವಗಳಿಂದ ಆಚರಿಸಲಾಯಿತು.

ಪ್ರಾತಃಕಾಲ ಶ್ರೀ ಮಹಾವೀರ ತೀರ್ಥಂಕರರ ಜಿನಬಿಂಬವನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ಪ್ರದಕ್ಷಿಣಾ ಪಥದಲ್ಲಿ ‘ಅಹಿಂಸಾ ಪರಮೋ ಧರ್ಮಕೀ ಜೈ, ಶ್ರೀ ಮಹಾವೀರ ಸ್ವಾಮಿ ಜೈ, ಜೈನ ಧರ್ಮಕೀ ಜೈ’ ಎಂಬ ಘೋಷವಾಕ್ಯದೊಂದಿಗೆ ಅತಿಶಯ ಶ್ರೀಕ್ಷೇತ್ರ ಶ್ರೀ ಜೈನಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ತರಲಾಯಿತು.

ಮೂಲನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿ, ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು. ಶ್ರೀ ವರ್ಧಮಾನ ಮಹಾವೀರ ಸ್ವಾಮಿಯ ಜನ್ಮಾಭಿಷೇಕ, ನಾಮಕರಣ ವಿಧಿ ನೆರವೇರಿಸಲಾಯಿತು.
“ಭಗವಾನ ಶ್ರೀ ಮಹಾವೀರರ ಜೀವನವು ನಮಗೆ ಸಹಬಾಳ್ವೆ – ಸಾಮರಸ್ಯ – ಅಹಿಂಸಾಭಾವದ – ಪರಿಸರ ರಕ್ಷಣೆಯ ಪಾಠ ಕಲಿಸುತ್ತದೆ. ಪ್ರಸಕ್ತ ಯುದ್ಧೋನ್ಮಾದ ಸಂಧಿಗ್ಧತೆಯಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳಿಗೂ ಶ್ರೀ ಮಹಾವೀರ ತೀರ್ಥಂಕರರ ಸಂದೇಶ ತಲುಪುವಂತಾಗಲಿ” ಎಂದು ಸ್ವಸ್ತಿಶ್ರೀಗಳವರು ಮಂಗಲ ಪ್ರವಚನದಲ್ಲಿ ತಿಳಿಸಿದರು.

“ಯುದ್ಧ ಬೇಡ, ಪರಸ್ಪರ ಪ್ರೀತಿಸುವ ಮನೋಧರ್ಮ ಒಳಿತನ್ನು ಮಾಡಲಿ” ಎಂದು ಹರಸಿದರು.
ಶ್ರೀ ಪದ್ಮಾವತಿ ಮಹಿಳಾ ಸಂಘದ ಸದಸ್ಯೆಯರು, ಶ್ರೀ ಕುಂದಕುಂದ ವಿದ್ಯಾಪೀಠದ ಗುರುಕುಲದ ವಿದ್ಯಾರ್ಥಿಗಳು, ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





