ಹೊಸನಗರ: ತಾಲೂಕಿನಲ್ಲಿ ಹವಾಮಾನಾಧಾರಿತ ಬೆಳೆ ವಿಮೆ (WBCIS) ಪರಿಹಾರ ವಿತರಣೆಯಲ್ಲಿ ವ್ಯಾಪಕ ತಾರತಮ್ಯ ಮತ್ತು ಲೋಪದೋಷಗಳು ನಡೆದಿವೆ ಎಂದು ಆರೋಪಿಸಿ ಸಹಕಾರಿ ಕ್ಷೇತ್ರದ ಪ್ರಮುಖರು ಹಾಗೂ ರೈತ ಮುಖಂಡರು ತಹಸೀಲ್ದಾರ್ ಭರತರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕೇವಲ 10 ರಿಂದ 15 ಕಿಲೋಮೀಟರ್ ಅಂತರದಲ್ಲಿರುವ ಅಕ್ಕಪಕ್ಕದ ಗ್ರಾಮ ಪಂಚಾಯಿತಿ ಅಥವಾ ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆ ಪ್ರಮಾಣದಲ್ಲಿ ಅಷ್ಟೊಂದು ಭಾರಿ ವ್ಯತ್ಯಾಸವಾಗಲು ಸಾಧ್ಯವೇ ಇಲ್ಲ. ಆದರೆ ವಿಮಾ ಕಂಪನಿ ಸಿದ್ಧಪಡಿಸಿರುವ ವರದಿ ಮತ್ತು ಪರಿಹಾರದ ಲೆಕ್ಕಾಚಾರ ಸಂಪೂರ್ಣ ಅವೈಜ್ಞಾನಿಕವಾಗಿದೆ. ವಾಸ್ತವವಾಗಿ ಮಳೆ ಕೊರತೆ ಎದುರಿಸಿದ ಪ್ರದೇಶಗಳಿಗೆ ಅತ್ಯಲ್ಪ ಪರಿಹಾರ ನೀಡಿ, ಹೆಚ್ಚು ಮಳೆಯಾಗಿರುವ ಅಥವಾ ಒಂದೇ ರೀತಿಯ ಹವಾಗುಣ ಹೊಂದಿರುವ ಪಕ್ಕದ ಊರುಗಳಿಗೆ ಹೆಚ್ಚಿನ ಮೊತ್ತ ಜಮೆ ಮಾಡಲಾಗಿದೆ. ಇದರಿಂದಾಗಿ ತೀವ್ರ ನಷ್ಟ ಅನುಭವಿಸಿದ ನೈಜ ಕೃಷಿಕರು ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ನಿಯೋಗ ಅಸಮಾಧಾನ ವ್ಯಕ್ತಪಡಿಸಿತು.
ಮಳೆಯಾಶ್ರಿತ ಹಾಗೂ ತೋಟಗಾರಿಕಾ ಬೆಳೆಗಾರರನ್ನು ಸಂಕಷ್ಟದಿಂದ ಪಾರುಮಾಡಬೇಕಿದ್ದ ಬೆಳೆ ವಿಮಾ ಯೋಜನೆ, ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಮಳೆಮಾಪಕ ಕೇಂದ್ರಗಳ ನಿರ್ವಹಣೆಯಲ್ಲಿನ ದೋಷ, ವಿಮಾ ಕಂಪನಿಗಳ ಬೇಜವಾಬ್ದಾರಿತನ ಹಾಗೂ ಸಂಬಂಧಪಟ್ಟ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಮನ್ವಯದ ಕೊರತೆಯೇ ಈ ಅನ್ಯಾಯಕ್ಕೆ ನೇರ ಕಾರಣ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಪ್ರೀಮಿಯಂ ಮೊತ್ತವನ್ನು ನಿಯಮಿತವಾಗಿ ಪಾವತಿಸಿದರೂ ಕಷ್ಟಕಾಲದಲ್ಲಿ ರೈತರಿಗೆ ನ್ಯಾಯ ಸಿಗುತ್ತಿಲ್ಲ ಎಂದು ದೂರಿದರು.
ತಾಲೂಕಿನಾದ್ಯಂತ ಮಳೆ ಮಾಪನದ ದತ್ತಾಂಶ ಮತ್ತು ವಿಮಾ ಪರಿಹಾರ ನಿಗದಿಯ ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕು. ಅರ್ಹ ರೈತರಿಗೆ ತಕ್ಷಣವೇ ಬಾಕಿ ಪರಿಹಾರ ಮೊತ್ತವನ್ನು ಬಿಡುಗಡೆಗೊಳಿಸಿ, ಸಮಗ್ರ ವಿಮಾ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಸೇರಿ ತಾಲೂಕು ಮಟ್ಟದಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಪ್ರಮುಖರಾದ ವಿನಾಯಕ ಚಕ್ಕಾರು, ವಾಟಗೋಡು ಸುರೇಶ್, ಡಿ.ಆರ್. ವಿನಯಕುಮಾರ್, ಎ.ವಿ. ಮಲ್ಲಿಕಾರ್ಜುನ, ಧರ್ಮೇಂದ್ರ, ಎಂ.ಎಂ. ಪರಮೇಶ್, ಗಿರೀಶ್ ಹಾಗೂ ವಿವಿಧ ಸಹಕಾರಿ ಸಂಘಗಳ ಪದಾಧಿಕಾರಿಗಳು, ಪ್ರಗತಿಪರ ಕೃಷಿಕರು ಉಪಸ್ಥಿತರಿದ್ದರು.

