ಹೊಸನಗರ

ಗ್ರಾಮೀಣ ಮಕ್ಕಳಲ್ಲಿನ ಕೀಳರಿಮೆ ಹೋಗಲಾಡಿಸಲು ‘ಪ್ರತಿಭಾ ಕಾರಂಜಿ’ ಸಹಕಾರಿ: ಬಿಇಒ ವೈ. ಗಣೇಶ್

ಕೋಡೂರು ಸಮೀಪದ ಯಳಗಲ್ಲು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮ ನಡೆಯಿತು‌.

Yalagallu Prathibha Karanji

ರಿಪ್ಪನ್‌ಪೇಟೆ: ಶಾಲಾ ವಿದ್ಯಾರ್ಥಿಗಳಲ್ಲಿ ನೈಸರ್ಗಿಕವಾಗಿ ಅಡಗಿರುವ ಕಲಾ ಕೌಶಲ್ಯ, ಸಾಂಸ್ಕೃತಿಕ ಆಸಕ್ತಿ ಹಾಗೂ ಸೃಜನಶೀಲ ಚಿಂತನೆಗಳನ್ನು ಹೊರತಂದು ಸೂಕ್ತ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ವೈ. ಗಣೇಶ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಕೋಡೂರು ಸಮೀಪದ ಯಳಗಲ್ಲು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇವಲ ಪಠ್ಯ ಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೆ, ಇಂತಹ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುತ್ತವೆ. ಗ್ರಾಮೀಣ ಮಟ್ಟದಿಂದಲೇ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜುಗೊಳಿಸಲು ಮತ್ತು ಅವರ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ ಕಲ್ಪಿಸುವುದು ಶಿಕ್ಷಣ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮವನ್ನು ಬಿ.ಜಿ. ಚಂದ್ರಮೌಳಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಬೆಳ್ಳೂರು ಶಿವಮೂರ್ತಿ ಮಾತನಾಡಿ, “ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಲ್ಲಿರುವ ಹಿಂಜರಿಕೆ ಹಾಗೂ ಕೀಳರಿಮೆಯನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ. ಮಕ್ಕಳಲ್ಲಿ ಬೌದ್ಧಿಕ ಬೆಳವಣಿಗೆ, ನಾಯಕತ್ವ ಗುಣ ಹಾಗೂ ಕಲಾಭಿರುಚಿ ಹೆಚ್ಚಿಸುವಲ್ಲಿ ಪ್ರತಿಭಾ ಕಾರಂಜಿ ಮಹತ್ವದ ಪಾತ್ರ ವಹಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ದಿನವಿಡೀ ನಡೆದ ಕ್ಲಸ್ಟರ್ ಮಟ್ಟದ ಸ್ಪರ್ಧೆಗಳಲ್ಲಿ ಸುತ್ತಮುತ್ತಲಿನ ವಿವಿಧ ಶಾಲೆಗಳಿಂದ ನೂರಾರು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಭಾವಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ, ಆಶುಭಾಷಣ, ಛದ್ಮವೇಷ, ಚಿತ್ರಕಲೆ, ಭರತನಾಟ್ಯ, ಕಂಠಪಾಠ ಸೇರಿದಂತೆ ಹತ್ತು ಹಲವು ಸ್ಪರ್ಧೆಗಳಲ್ಲಿ ಪುಟಾಣಿಗಳು ತಮ್ಮ ಕಲಾಪ್ರೌಢಿಮೆ ಮೆರೆದು ನೆರೆದಿದ್ದ ಶಿಕ್ಷಕರು ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾದರು.

ವೇದಿಕೆಯಲ್ಲಿ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲೆ ಚಂದ್ರಕಲಾ, ಸಿಆರ್‌ಪಿ ಪ್ರದೀಪ್, ಮುಖಂಡರಾದ ಮುರಳೀಧರ, ವೆಂಕಟೇಶ್ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಬಹುಮಾನ ನೀಡಿ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]