ಹೊಸನಗರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ತಾಲೂಕಿನ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೊಸನಗರ ಶಾಖೆಯ ವತಿಯಿಂದ ಶಾಲೆಗೆ ಭೇಟಿ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.

ಶಾಖಾ ವ್ಯವಸ್ಥಾಪಕರಾದ ಮಾಧವ, ಶಿಕ್ಷಕಿ ರತ್ನಕುಮಾರಿ ಅವರನ್ನು ಸನ್ಮಾನಿಸಿ ಮಾತನಾಡುತ್ತಾ, “ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದರೆ, ಇಂತಹ ಸಮರ್ಪಿತ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಇನ್ನಷ್ಟು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಶಾಲೆಯ ಪರಿಸರಸ್ನೇಹಿ ಆವರಣ ಹಾಗೂ ಗುಣಮಟ್ಟದ ಶೈಕ್ಷಣಿಕ ವಾತಾವರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರಸ್ತುತಪಡಿಸಿದ ನಿರರ್ಗಳ ಶ್ಲೋಕ-ಸ್ತೋತ್ರ ಪಠಣ, ಅವರ ಆತ್ಮವಿಶ್ವಾಸ ಮತ್ತು ಸಂಸ್ಕಾರಯುತ ನಡವಳಿಕೆ ಶಾಲಾ ಶಿಕ್ಷಕ ವೃಂದದ ಕರ್ತವ್ಯನಿಷ್ಠೆಗೆ ಸಾಕ್ಷಿಯಾಗಿತ್ತು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಸಿಬ್ಬಂದಿಗಳಾದ ಗಣೇಶ್, ಮಧುಕರ್, ವಿಜಯಲಕ್ಷ್ಮೀ ಹಾಗೂ ಶಾಲೆಯ ಶಿಕ್ಷಕಿ ಅಂಬಿಕಾ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

