ಬಾಳೆಹೊನ್ನೂರು ; ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತಮ್ಮ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತನ್ನ ಪುಟ್ಟ ಮಗಳ ನೋವಿನ ನುಡಿ ಕೇಳಿ ಕೆರಳಿದ ತಂದೆಯೊಬ್ಬ ಪತ್ನಿಯ ಮೇಲಿನ ಕೋಪದಿಂದ ತನ್ನ ಅತ್ತೆ, ನಾದಿನಿ ಹಾಗೂ ಮಗುವನ್ನು ಕೊಲೆ ಮಾಡಿದ್ದಾನೆ.
ಅತ್ತೆ ಜ್ಯೋತಿ (50), ಮಗಳು ಮೌಲ್ಯ (6) ಮತ್ತು ನಾದಿನಿ ಸಿಂಧು (24) ಗುಂಡು ತಗುಲಿ ಮೃತಪಟ್ಟಿದ್ದಾರೆ. ನಾದಿನಿಯ ಗಂಡ ಅವಿನಾಶ್ ಕಾಲಿಗೆ ಗುಂಡು ತಗಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರತ್ನಾಕರ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಈತ ಶಾಲೆಯ ವಾಹನ ಚಾಲಕನಾಗಿದ್ದು, ನಾಡ ಬಂದೂಕಿನಿಂದ ಮೂವರನ್ನ ಹತ್ಯೆಗೈದು ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗಳ ಮಾತಿಗೆ ನೊಂದು ಕೊಲೆ ?
ಕೊಲೆ ಮಾಡಿರುವ ರತ್ನಾಕರ್ ಸೆಲ್ಫಿ ವಿಡಿಯೋ ಮೂಲಕ ಸಂಸಾರದ ನೋವು ತೋಡಿಕೊಂಡಿದ್ದಾನೆ. ರತ್ನಾಕರ್ ಪತ್ನಿ ಎರಡು ವರ್ಷದ ಹಿಂದೆ ದೂರವಾಗಿದ್ದರು. ಮಗಳು ರತ್ನಾಕರ್ ಬಳಿ ಇದ್ದರು. ಮಗಳಿಗೆ ಶಾಲೆಯಲ್ಲಿ ಮಕ್ಕಳು ನಿಮ್ಮ ಅಮ್ಮ ಎಲ್ಲಿ ಕೇಳ್ತಾರೆ, ಮಗಳು ನನಗೆ ಕೇಳುತ್ತಾಳೆ. ನನಗೆ ಗೊತ್ತಿಲ್ಲದಂತೆ ಮಗಳು ಆಲ್ಬಂನಿಂದ ಫೋಟೋ ತೆಗೆದುಕೊಂಡು ಹೋಗಿ ಶಾಲೆಯಲ್ಲಿ ತೋರಿಸಿದ್ದಾಳೆ. ಮಗಳು ತುಂಬಾ ಬೇಜಾರಾಗಿದ್ಲು, ʼʼಪಪ್ಪಾ… ಎಲ್ಲಾ ನಿಮ್ಮ ಅಮ್ಮ ಎಲ್ಲಿ ಎನ್ನುತ್ತಾರೆ” ಎಂದು ಕೇಳುತ್ತಾಳೆ. ನನ್ನ ನಿರ್ಧಾರವನ್ನ ನನ್ನ ಕುಟುಂಬದವರಿಗೆ ಹೇಳಿದ್ದೇನೆ. ನನ್ನ ಮನೆಯವಳು ನನಗೆ ಮೋಸ ಮಾಡಿ ಹೋಗಿ 2 ವರ್ಷ ಆಯ್ತು. ಪಾಪುನೂ ಬೇಡ ಅಂತ ಬಿಟ್ಟಳು, ಪಾಪುನೂ ನಾನೇ ನೋಡಿಕೊಳ್ಳುತ್ತಿದ್ದೇನೆ” ಎಂದು ಕೊಲೆ ಬಳಿಕ ಸೆಲ್ಫಿ ವಿಡಿಯೋ ಮಾಡಿ ಹೇಳಿಕೊಂಡಿದ್ದಾನೆ. ತನ್ನ ಮಗಳ ಖುಷಿ, ಪ್ರೀತಿ, ಸಂತೋಷದ ಮುಂದೆ ಏನೂ ಇಲ್ಲ ಎಂದು ಅತ್ತೆ ನಾದಿನಿ ಮತ್ತು ಮಗುವನ್ನು ಕೊಂದು ಹಾಕಿದ್ದಾನೆ.
ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.