ಹೊಸನಗರ ; ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಜನಿವಾರ ತೆಗೆಸಿ ಮೂಲ ಹಿಂದುಗಳಿಗೆ ಹಾಗೂ ಜನಿವಾರ ಧರಿಸುವ 20 ಜಾತಿಯವರಿಗೆ ಅಪಮಾನ ಮಾಡಿದ್ದು ಈ ಅಪರಾಧಕ್ಕೆ ಕೇವಲ ಹೊಮ್ ಗಾರ್ಡ್, ಕಿರಿಯ ಅಧಿಕಾರಿಗಳನ್ನು ಅಮಾನತು ಮಾಡಿದರೆ ಸಾಲದು ಶಂಖದಿಂದ ತೀರ್ಥ ಬರುವ ಹಾಗೂ ಯಾರದ್ದೋ ಕುಮ್ಮಕಿನಿಂದ ಈ ಕೃತ್ಯ ನಡೆಸಲಾಗಿದ್ದು ಸಿಇಟಿ ಮುಖ್ಯಸ್ಥನನ್ನೆ ಹೊಣೆಗಾರರನ್ನಾಗಿ ಮಾಡಿ ಅವರನ್ನು ವಜಾ ಮಾಡಬೇಕೆಂದು ಬ್ರಾಹ್ಮಣ ಸಮಾಜದ ಮುಖಂಡ ಕೆ. ವಿ ಕೃಷ್ಣಮೂರ್ತಿ ಆಗ್ರಹಿಸಿದರು.
ಬ್ರಾಹ್ಮಣ ಮಹಾಸಂಘದ ವತಿಯಿಂದ ಜನಿವಾರ ತೆಗೆಸಿದ ಪ್ರಕರಣದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಅದರಂತೆ ಹೊಸನಗರದ ಬ್ರಾಹ್ಮಣ ಮಹಾಸಭಾ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಈ ಕೃತ್ಯವನ್ನು ಖಂಡಿಸಿ ತಹಸೀಲ್ದಾರ್ ರಶ್ಮಿ ಹಾಲೇಶ್‌ಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಕೆ.ವಿ. ಕೃಷ್ಣಮೂರ್ತಿ, ಮೊನ್ನೆಯಷ್ಟೇ ರಾಜ್ಯಾದ್ಯಂತ ನಡೆದ ವೃತ್ತಿಪರ ಕೋರ್ಸ್‌ಗಳ ಸಿ.ಇ.ಟಿ. ಪರೀಕ್ಷೆಯ ದಿನದಂದು ಪರೀಕ್ಷಾ ಅಧಿಕಾರಿಗಳು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ್ದಲ್ಲದೆ ತೆಗೆಯಲು ಒಪ್ಪದ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆ ಬರೆಯುವ ಅವಕಾಶವನ್ನೇ ನೀಡದೆ ಸಂವಿಧಾನ ಬಾಹಿರ ಘಟನೆ ನಡೆದಿರುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವೆಡೆ ಜನಿವಾರವನ್ನು ಕತ್ತರಿಸಿ ಹಾಕಿದ ಕುಕೃತ್ಯವೂ ನಡೆದಿದ್ದು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ನಮ್ಮ ಹೆಮ್ಮೆಯ ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿರುತ್ತದೆ.
ಈ ನಿಟ್ಟಿನಲ್ಲಿ ಬ್ರಾಹ್ಮಣ್ಯದ ಸಂಕೇತವಾಗಿರುವ ಜನಿವಾರವನ್ನು ಬ್ರಹ್ಮೋಪದೇಶದ ಸಂದರ್ಭದಲ್ಲಿ ಧರಿಸಿದ ನಂತರ ಸಾಯುವವರೆಗೂ ಇಟ್ಟುಕೊಳ್ಳಬೇಕಾಗಿರುತ್ತದೆ. ಹೀಗಿರುವಾಗ ಕೇವಲ ದ್ವೇಷ ಹಾಗೂ ವಿನಾಃ ಕಾರಣದಿಂದ ಜನಿವಾರವನ್ನು ತೆಗೆಸಿರುವುದು ಅತ್ಯಂತ ಹೀನಾಯ ಮತ್ತು ಇದು ಬ್ರಾಹ್ಮಣರ ಮೇಲೆ ನಡೆದ ದೌರ್ಜನ್ಯವೆಂದೇ ಪರಿಗಣಿಸಬೇಕಾಗಿರುತ್ತದೆ.
ಇಂದು ಬ್ರಾಹ್ಮಣ ಸಮಾಜವನ್ನು ಹಾಗೂ ಅವರ ಸಂಸ್ಕಾರಗಳನ್ನು ಅವಹೇಳನ ಮಾಡುವುದು ಕೆಲವರಿಗೆ ಒಂದು ಶೋಕಿಯಾಗಿಬಿಟ್ಟಿದೆ. ಸಮಾಜದಲ್ಲಿ ಏನೇ ಘಟಿಸಿದರೂ ಬ್ರಾಹ್ಮಣರನ್ನು ಬೈಯುವುದು ಮಾಮೂಲಿಯಾಗಿದೆ. ಸಾತ್ವಿಕತೆಯಿಂದ ತಾವಾಯಿತು ತಮ್ಮ ಪಡಾಯಿತು ಎಂಬಂತಿರುವ ಸದಾ ದೇಶ ಮೊದಲು ಎಂದು ರಾಷ್ಟ್ರಹಿತವನ್ನು ಬಯಸಿ ಧಾರ್ಮಿಕ ವಿಧವಿಧಾನಗಳೊಂದಿಗೆ ಸರ್ವೇ ಜನಾಃ ಸುಖಿನೋ ಭವಂತು ಎಂಬುದನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವ ಬ್ರಾಹ್ಮಣ ಸಮಾಜದ ಮೇಲಿನ ಈ ಅನಾವಶ್ಯಕ ದೌರ್ಜನ್ಯವನ್ನು ನಾವೆಲ್ಲರೂ ಒಮ್ಮತದಿಂದ ಖಂಡಿಸುತ್ತಿದ್ದೇವೆ. ಏಕೆಂದರೆ ಸಹನೆಗೂ ಒಂದು ಮಿತಿ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯವರು ಈ ಕೂಡಲೇ ಅಕ್ಷಮ್ಯವಾದ ದೌರ್ಜನ್ಯ ಎಸೆಗಿರುವ ಎಲ್ಲಾ ಅಧಿಕಾರಿಗಳನ್ನು ಹುಡುಕಿ ಅಮಾನತು ಮಾಡುವುದಲ್ಲದೇ ಶಿಕ್ಷಣ ಇಲಾಖೆಯು ಬ್ರಾಹ್ಮಣ ಸಮಾಜದ ಕ್ಷಮಾಪಣೆಯನ್ನು ಕೇಳುವಂತೆ ಆಗ್ರಹಿಸಿದರು.

ಇಂತಹ ಕೃತ್ಯ ಮುಂದೆ ಯಾವತ್ತೂ ನಡೆಯದಂತೆ ಕಾನೂನು ಪ್ರಕಾರವಾದ ಕಠಿಣ ಕ್ರಮಗಳನ್ನು ಕೈಗೊಂಡು ಸಂವಿಧಾನ ಬದ್ಧವಾದ ನಮ್ಮ ಹಕ್ಕುಗಳನ್ನು ರಕ್ಷಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.
ಈ ಬೃಹತ್ ಪ್ರತಿಭಟನೆಯಲ್ಲಿ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ. ರಾಮಚಂದ್ರರಾವ್, ಕಾರ್ಯದರ್ಶಿ ಸ್ವರೂಪ್, ಎನ್ ಶ್ರೀಧರ ಉಡುಪ, ಎನ್ ದತ್ತಾತ್ರೇಯ ಉಡುಪ, ಭೋಜರಾವ್, ಹೆಚ್.ಕೆ. ಹರೀಶ್, ವಾದಿರಾಜ್, ಎನ್.ಆರ್ ದೇವಾನಂದ್, ಗುರುಜಿರಣ್, ಶ್ರೀಪತಿರಾವ್, ವಿನಾಯಕ, ಸುಧೀಂದ್ರ ಪಂಡಿತ್, ಗುಬ್ಬಿಗಾ ಅನಂತರಾವ್, ಗುಬ್ಬಿಗಾ ಸುನೀಲ್, ಗುಬ್ಬಿಗಾ ರವಿ, ಚಿತ್ತಾರ ಮುರುಳಿ, ಸತ್ಯನಾರಾಯಣ, ಪ್ರವೀಣ್, ಗೌತಮ್ ಕುಮಾರಸ್ವಾಮಿ ಇನ್ನೂ ಮುಂತಾದವರು ಭಾಗವಹಿಸಿದರು.