HOSANAGARA ; ವಿಧಾನ ಪರಿಷತ್ ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ರವರ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅಸಭ್ಯ ಭಾಷೆ ಪ್ರಯೋಗ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಅಂಬೇಡ್ಕರ್‌ರವರ ಬಗ್ಗೆ ಅವಹೇಳನಕಾರಿ ಮಾತನಾಡಿರುವುದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ನೇತೃತ್ವ ಹಾಗೂ ಬ್ಲಾಕ್ ಕಾಂಗ್ರೆಸ್ ಮಹಿಳಾ ತಾಲ್ಲೂಕು ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯರವರ ನೇತೃತ್ವದಲ್ಲಿ ಹೊಸನಗರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹೊಸನಗರದ ಕೆಲವು ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಹೊಸನಗರ ಗ್ರೇಡ್ 2ತಹಶೀಲ್ದಾರ್ ರಾಕೇಶ್‌ರವರಿಗೆ ಮನವಿ ಪತ್ರ ಸಲ್ಲಿಸಿ ತಕ್ಷಣ ಬಿಜೆಪಿ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಡಿ.19ರ ಗುರುವಾರ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿಯವರು ರಾಜ್ಯ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ರವರಿಗೆ ಸದನದಲ್ಲಿ ಅತ್ಯಂತ ಕೆಟ್ಟ ಅಸಂಸದೀಯ ಪದಬಳಕೆ ಮಾಡಿ ಇಡಿ ಮಾನವ ಕುಲಕ್ಕೆ, ಮಹಿಳಾ ಸಮಾಜಕ್ಕೆ, ಅವಾಚ್ಯ ಶಬ್ದ ಬಳಕೆ ಮಾಡಿದ್ದು, ‘Prostitute’ ಎಂದು ಸಂಭೋಸಿದ್ದು ಹೇಯ ಕೃತ್ಯ ಎಂದು ಭಾವಿಸಿದ್ದೇವೆ. ಆರೋಪಿ ಸಿ. ಟಿ.ರವಿಯವರು ಸಹಾ ಪ್ರಚೋದನಕಾರಿ ಕೆಟ್ಟ ಮಾತುಗಳಿಂದ ಅಲ್ಪಸಂಖ್ಯಾತರ ವಿರುದ್ಧ ಮತ್ತು ರಾಜಕೀಯ ವಿರೋಧಿಗಳನ್ನು ಹಂಗಿಸುವ ಪ್ರವೃತ್ತಿಯನ್ನೇ ಬಳಸಿ ರಾಜಕೀಯವಾಗಿ ಮೇಲೆರಿದವರು. ಇವರ ನಡವಳಿಕೆಯನ್ನು ಯಾವುದೇ ಮಹಿಳೆಯರು ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯಿಲ್ಲ. ಇವರ ವಿಧಾನ ಪರಿಷತ್ ಸದಸ್ಯತ್ವವನ್ನು ಸಭಾಧ್ಯಕ್ಷರು ರದ್ದು ಮಾಡಬೇಕು, ಆರೋಪಿ ಸಿ.ಟಿ.ರವಿಯವರ ಬೆಂಬಲಕ್ಕೆ ನಿಂತ ಬಿ.ಜೆ.ಪಿ ಮತ್ತು ಬಿ.ಜೆ.ಪಿ ಪರಿವಾರದವರು ದೇಶದ ಏಕತೆ, ಸಮಗ್ರತೆಗೆ ದುಡಿದವರಲ್ಲಿ ಭಾರತ ರತ್ನ ಬಿ.ಆರ್. ಅಂಬೇಡ್ಕರ್ ರಚಿಸಿದ ಮತ್ತು ಈ ದೇಶದ ಜನ ಒಪ್ಪಿಕೊಂಡ ಸಂವಿಧಾನದ ವಿರೋಧಿಗಳೇ ಆಗಿದ್ದಾರೆ.
ಬಿ.ಜಿ.ಪಿ. ಮತ್ತು ಬಿ.ಜೆ.ಪಿ ಪರಿವಾರದವರು ಒಪ್ಪಿಕೊಂಡ ಮನುಸ್ಮೃತಿ ಅವರ ಸಂವಿಧಾನ. ಅವರ ಸಂವಿಧಾನವನ್ನು ಡಾ|| ಬಿ ಅರ್ ಅಂಬೇಡ್ಕರ್‌ರವರು 1927ರ ಡಿಸೆಂಬರ್ ತಿಂಗಳಲ್ಲಿ ಬಹಿರಂಗ ಸಭೆಯಲ್ಲಿ ಸುಟ್ಟು ಹಾಕಿದರು. ಬಿ.ಜೆ.ಪಿಗರು ಸದಾ ಪರಿವರ್ತನೆ ಮತ್ತು ಪ್ರಗತಿಯ ವಿರೋಧಿಗಳು. ಹಣ. ಅಧಿಕಾರ, ಜನ ಬೆಂಬಲ ಪಡೆಯಲು ಅಂಬೇಡ್ಕರ್‌ರವರ ಹೆಸರು ಹೇಳುತ್ತಾರೆ. ಹಿಂದೂ ಸಮಾಜದ ಸಮಾನತೆಗೆ ವಿರೋಧಿಗಳ ಪರಿಗಣಿಸಿ, ಅಂಬೇಡ್ಕರ್ ಅವರ ನೋವಿನ ತೀರ್ಮಾನ ತೆಗೆದುಕೊಂಡಿದ್ದು ಅಂದರೆ ಹಿಂದು ಆಗಿ ಹುಟ್ಟಿದ್ದೇನೆ ಆದರೆ ಹಿಂದೂ ಆಗಿ ಸಾಯುವುದಿಲ್ಲ ಎಂದು ಘೋಷಣೆ ಮಾಡಿ ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ವಿರೋಧಿ ಸಿದ್ಧಾಂತದಿಂದ ಅಲ್ಲ.1925ರಲ್ಲಿ ಜಿ.ಜೆ.ಪಿ ಪರಿವಾರದ ಹುಟ್ಟು 2025ರ ದಶಮಿಗೆ ಒಂದು ನೂರು ವರ್ಷ ತಲುಪುತ್ತೆ. ಈ ನೂರು ವರುಷದಲ್ಲಿ ಹಿಂದೂ ಸಮಾಜದ ಸಾಮಾಜಿಕ ಸಮಾನತೆಗೆ ಯಾವ ನಿರ್ಧಿಷ್ಟ ನಿಗದಿತ ಕಾರ್ಯಕ್ರಮವನ್ನು ಬಿ.ಜೆ.ಪಿ ಹಮ್ಮಿಕೊಂಡಿದೆ ಎಂದು ಬಹಿರಂಗ ಪಡಿಸಲಿ. ಈ ದೇಶದ ತುಳಿತಕ್ಕೆ ಒಳಗಾದ ಸಮಾಜವನ್ನು ಮೇಲೆತ್ತುವ ಕಾರ್ಯವನ್ನು ಡಾ|| ಬಿ ಅರ್ ಅಂಬೇಡ್ಕರ್ ಸಂವಿಧಾನದ ಮೂಲಕ ಕ್ರಾಂತಿಕಾರಿ ಮೀಸಲಾತಿ ತಂದಿದ್ದಕ್ಕೆ ಈ ದೇಶದ ಬಹು ಸಂಖ್ಯಾತರ ತುಳಿತಕ್ಕೆ ಒಳಗಾದ ಹಿಂದುಗಳ ಪರಿಸ್ಥಿತಿ ಊಹಿಸಲು ಅಸಾಧ್ಯ. ಆ ಕಾರಣಕ್ಕಾಗಿಯೇ ಅಮಿತ್ ಶಾ ಲೋಕಸಭೆಯಲ್ಲಿ ಡಾ|| ಬಿ ಅರ್ ಅಂಬೇಡ್ಕರ್‌ರವರ ವಿರುದ್ಧ ಹರಿಹಾಯ್ದಿದ್ದು. ಅವರ ಲೋಕಸಭೆಯ ಹೇಳಿಕೆಯನ್ನು ನಮ್ಮ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದರು.
ಬ್ಲಾಕ್ ಮಹಿಳ ಘಟಕದ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಮಾತನಾಡಿ, ಹೆಣ್ಣು ಕುಲವನ್ನು ಅವಮಾನಿಸಿದರೆ ಅವರ ಅಂತ್ಯ ಗ್ಯಾರಂಟಿ ಈ ಹಿಂದೆ ಮಹಾಭಾರತದಲ್ಲಿ ದ್ರೌಪತಿಗೆ ಮಾಡಿದ ಅವಮಾನದಿಂದ ಕೌರವರ ಅಂತ್ಯವಾಯಿತು. ಅರ್ಜುನ ತನ್ನ ಹೆಂಡತಿ ಚಿತ್ರಂಗದೆಗೆ ಅವಮಾನಿಸಿರುವುದರಿಂದ ಬಬ್ರುವಾಹನನಿಂದ ಅಂತ್ಯವಾಯಿತು. ಅದೇ ರೀತಿ ಸಿ.ಟಿ ರವಿಯವರಿಂದ ಮಹಿಳೆಗೆ ಅವಮಾನವಾಗಿದ್ದು ಬಿಜೆಪಿಯವರ ಅಂತ್ಯ ಗ್ಯಾರಂಟಿ ಎಂದರು.
ಈ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಚಿದಂಬರ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ನೂರ ಮೇಟಿಲ್ದಾ ಸ್ವೀಕ್ವೇರಾ, ಬೃಂದಾವನ ಪ್ರವೀಣ್, ಎಂ.ಪಿ ಸುರೇಶ್, ನಾಸೀರ್, ಮಹೇಂದ್ರ, ಚಂದ್ರಕಲಾ ನಾಗರಾಜ್, ಮೈನಾವತಿ ರಾಜಮೂರ್ತಿ, ಜಯನಗರ ಗುರು ಇನ್ನೂ ಮುಂತಾದವರು ಬಾಗವಹಿಸಿದ್ದರು.