ಹೊಸನಗರ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಗಂಭೀರ ಲೋಪದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ, ಇದೇ ನವೆಂಬರ್ 19ರಂದು ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ‘ಮಾಮ್‌ಕೋಸ್’ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿಟ್ಟೂರಿನ ಶೋಧಾ ಫಾರ್ಮರ್ಸ್ ಸಂಸ್ಥೆ ಮತ್ತು ಹೊಸನಗರ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಸಂಸ್ಥೆಗಳ ಜಂಟಿ ನೇತೃತ್ವದಲ್ಲಿ ಈ ಹೋರಾಟ ರೂಪಿಸಲಾಗಿದೆ. ಪ್ರತಿಭಟನೆಯಲ್ಲಿ ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ತಾಲೂಕುಗಳ ಸಾವಿರಾರು ಬೆಳೆಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ:
“ಕಳೆದ ಎರಡು ವರ್ಷಗಳಿಂದ ವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ನಿರಂತರ ಅನ್ಯಾಯವಾಗುತ್ತಿದೆ. ಬೆಳೆ ನಷ್ಟ ಸಂಭವಿಸಿದರೂ ಅದಕ್ಕೆ ತಕ್ಕದಾದ ಪರಿಹಾರ ಸಿಗುತ್ತಿಲ್ಲ. ಆಡಳಿತ ವ್ಯವಸ್ಥೆ ಮತ್ತು ಅಧಿಕಾರಿಗಳ ವೈಫಲ್ಯವೇ ಇದಕ್ಕೆ ನೇರ ಕಾರಣವಾಗಿದೆ. ರೈತರಿಗೆ ನ್ಯಾಯಯುತ ಪರಿಹಾರ ನೀಡುವುದರ ಜೊತೆಗೆ, ಕೆಟ್ಟು ನಿಂತಿರುವ ಮಳೆಮಾಪನ ಕೇಂದ್ರಗಳನ್ನು ತಕ್ಷಣ ದುರಸ್ತಿಗೊಳಿಸಬೇಕು ಮತ್ತು ಮುಂದೆ ಇಂತಹ ತಾಂತ್ರಿಕ ಸಮಸ್ಯೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ” ಎಂದು ಕೃಷ್ಣಮೂರ್ತಿ ವಿವರಿಸಿದರು.
ರೈತರಿಗೆ ದುಪ್ಪಟ್ಟು ನಷ್ಟ:
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಸಂಸ್ಥೆಯ ಅಧ್ಯಕ್ಷ ಎನ್.ಆರ್. ದೇವಾನಂದ ಮಾತನಾಡಿ, “ಒಂದೆಡೆ ಬೆಳೆ ನಷ್ಟ ಅನುಭವಿಸಿರುವ ರೈತರು, ಮತ್ತೊಂದೆಡೆ ಪಾವತಿಸಿದ ವಿಮಾ ಕಂತಿನ ಹಣವನ್ನೂ ಕಳೆದುಕೊಂಡು ದುಪ್ಪಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಹೋರಾಟಕ್ಕೆ ಹೊಸನಗರದ ಕೊಡಚಾದ್ರಿ ಸೌಹಾರ್ದ ಸಂಸ್ಥೆ, ಆಪ್ಸ್ಕೋಸ್, ಶಾರದಾ ವಿವಿಧೋದ್ದೇಶ ಸಹಕಾರಿ ಸಂಸ್ಥೆ ಹಾಗೂ ಸುಮೇಧಾ ಅಡಿಕೆ ಮಂಡಿ ಸೇರಿದಂತೆ ಹಲವು ಸಹಕಾರಿ ಮತ್ತು ಕೃಷಿ ಸಂಘಟನೆಗಳು ಸಂಪೂರ್ಣ ಬೆಂಬಲ ಘೋಷಿಸಿವೆ ಎಂದು ಅವರು ಮಾಹಿತಿ ನೀಡಿದರು.

