ಹೊಸನಗರ : ತಾಲೂಕಿನಾದ್ಯಂತ ಪದೇ ಪದೇ ಆಗುತ್ತಿರುವ ಅನಿಯಮಿತ ವಿದ್ಯುತ್ ಕಡಿತವನ್ನು ಖಂಡಿಸಿ ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ನೂರಾರು ಗ್ರಾಹಕರು ಪಾದಯಾತ್ರೆಯ ಮೂಲಕ ಸ್ಥಳೀಯ ಮೆಸ್ಕಾಂ ಕಚೇರಿಗೆ ತೆರಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಮೆಸ್ಕಾಂ ಕಚೇರಿಯಲ್ಲಿ ಎಸ್‌ಇ ಜಯದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ‘ಜನಸಂಪರ್ಕ ಸಭೆ’ಯಲ್ಲಿ ಭಾಗವಹಿಸಿದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆಯನ್ನೇಗರೆದರು.
ಸಮಸ್ಯೆಗಳ ನಿರ್ಲಕ್ಷ್ಯ:
ಕಳೆದ ಕೆಲವು ತಿಂಗಳುಗಳಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಮಿತಿಮೀರಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಮೆಸ್ಕಾಂ ಸಂಪೂರ್ಣ ವಿಫಲವಾಗಿದೆ.
ಸಿಬ್ಬಂದಿಯ ಅಸಡ್ಡೆ:
ಅಧಿಕಾರಿಗಳು ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರುತ್ತಿದ್ದಾರೆ. ಜವಾಬ್ದಾರಿಯುತ ಸಿಬ್ಬಂದಿಯ ಮೊಬೈಲ್ ಫೋನ್‌ಗಳು ಸದಾ ಸ್ವಿಚ್ ಆಫ್ ಆಗಿರುತ್ತವೆ, ಇದರಿಂದ ಗ್ರಾಹಕರಿಗೆ ತುರ್ತು ಸೇವೆಗಳು ಸಿಗುತ್ತಿಲ್ಲ.
ಅಕ್ರಮ ಸಂಪರ್ಕಗಳ ಹಾವಳಿ:
ರೈತರ ಹೆಸರಿನಲ್ಲಿ ಅರಣ್ಯ ಪ್ರದೇಶಗಳಲ್ಲಿ ವಾಣಿಜ್ಯ ಬಳಕೆಗೆ ಹಾಗೂ ಹತ್ತಾರು ಅನಧಿಕೃತ ಪಂಪ್‌ಸೆಟ್‌ಗಳಿಗೆ ಬೇನಾಮಿಯಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ದೈನಂದಿನ ಬದುಕಿಗೆ ಕಂಟಕ:
ನಿರಂತರ ಪವರ್ ಕಟ್‌ನಿಂದಾಗಿ ವ್ಯಾಪಾರ-ವಹಿವಾಟಿಗೆ ತೀವ್ರ ತೊಂದರೆಯಾಗುತ್ತಿದ್ದು, ಕುಡಿಯುವ ನೀರು ಹಾಗೂ ಶೌಚಾಲಯದಂತಹ ಮೂಲಭೂತ ಅಗತ್ಯಗಳಿಗೂ ಜನರು ಪರದಾಡುವಂತಾಗಿದೆ.
ಲೈನ್‌ಮ್ಯಾನ್‌ಗಳ ಕೊರತೆ:
ಗ್ರಾಮೀಣ ಭಾಗಗಳಲ್ಲಿ ಲೈನ್‌ಮ್ಯಾನ್‌ಗಳ ತೀವ್ರ ಕೊರತೆ ಇದ್ದು, ತಾಂತ್ರಿಕ ದೋಷಗಳನ್ನು ಸಕಾಲದಲ್ಲಿ ಸರಿಪಡಿಸುತ್ತಿಲ್ಲ. ಮೇಲಾಧಿಕಾರಿಗಳ ಆದೇಶದಂತೆ ಕೇವಲ ಕಾಟಾಚಾರಕ್ಕೆ ಜನಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದೆಯೇ ಹೊರತು, ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ.
ಭರವಸೆ ನೀಡಿದ ಅಧಿಕಾರಿಗಳು, ಆಕ್ರೋಶಗೊಂಡ ಜನತೆ :
ಸಭೆಯಲ್ಲಿ ಪ್ರತಿಕ್ರಿಯಿಸಿದ ಎಸ್‌ಇ ಜಯದೇವಪ್ಪ, “ಹರಿದ್ರಾವತಿ ಗ್ರಾಮದಲ್ಲಿ 110 ಕೆವಿ ವಿದ್ಯುತ್ ಸ್ಥಾವರ ನಿರ್ಮಾಣವಾದಾಗಿನಿಂದ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮಸಗಲ್ಲಿ ಅಥವಾ ಮಳೂರು ಗ್ರಾಮದಲ್ಲಿ ಹೊಸ ಗ್ರಿಡ್ ನಿರ್ಮಿಸಲು ಕಂದಾಯ ಮತ್ತು ಅರಣ್ಯ ಇಲಾಖೆಗಳಿಂದ ಜಂಟಿ ಸರ್ವೆ ಕಾರ್ಯ ಶೀಘ್ರದಲ್ಲೇ ನಡೆಯಲಿದೆ” ಎಂದು ಸ್ಪಷ್ಟನೆ ನೀಡಿದರು.

ಆದರೆ, ಅಧಿಕಾರಿಗಳ ಈ ಉತ್ತರದಿಂದ ಮತ್ತಷ್ಟು ಕೆರಳಿದ ಗ್ರಾಹಕರು, “ಕಳೆದ 10 ವರ್ಷಗಳಿಂದಲೂ ಅರಣ್ಯ ಮತ್ತು ಕಂದಾಯ ಭೂಮಿಯ ನೆಪವೊಡ್ಡಿ ಕಾಮಗಾರಿಯನ್ನು ಮುಂದೂಡಲಾಗುತ್ತಿದ್ದು, ಮೆಸ್ಕಾಂ ಸದಾ ಇದೇ ಸಬೂಬು ಹೇಳುತ್ತಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯುತ್ ಬಿಲ್ ಕಟ್ಟದಂತೆ ಕರೆ:
ಹೊಸನಗರ ವರ್ತಕರ ಸಂಘದಿಂದ ಪಟ್ಟಣದಲ್ಲಿ ಪದೇ ಪದೇ ಕೈ ಕೊಡುತ್ತಿರುವ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಕೋರಿ ಮೆಸ್ಕಾಂ ಎಸ್ಇ ಜಯದೇವಪ್ಪರನ್ನು ಆಗ್ರಹಿಸಲಾಯಿತು.
ಸಮಸ್ಯೆ ಬಗೆಹರಿಯದ ಪಕ್ಷದಲ್ಲಿ ವರ್ತಕರ ಸಂಘದಿಂದ ಮುಂದಿನ ದಿನಗಳಲ್ಲಿ ಸಾಮೂಹಿಕವಾಗಿ ವಿದ್ಯುತ್ ಬಿಲ್ ಕಟ್ಟದಂತೆ ಕರೆ ನೀಡುವುದಾಗಿ ಘೋಷಣೆ ಮಾಡಿದರು.
ಸಭೆಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೋಣೆ, ಮೆಸ್ಕಾಂ ಎಇಇ ಚಂದ್ರಶೇಖರ್, ಎಸ್‌ಒ ಮಾಯಣ್ಣ, ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ವಿ. ಜಯರಾಮ್ ಹಾಗೂ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

