SHIVAMOGGA ; ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ. ಯಾವುದೇ ರೈತರು ಧೃತಿಗೆಡಬಾರದು. ಸರ್ಕಾರ ರೈತರ ಪರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.
ಲೋಕೋಪಯೋಗಿ ಭವನದಲ್ಲಿನ ಸಭೆ ನಂತರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಅ.21 ಕ್ಕೆ ಸಾಗರದಲ್ಲಿ ಅರಣ್ಯ ಭೂಮಿ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಕೆಲಸ ಮಾಡುತ್ತಿದೆ.
ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಉತ್ತಮ ನ್ಯಾಯವಾದಿಗಳನ್ನು ನೇಮಿಸಿ ಐಎ ಹಾಕಲಾಗುವುದು. ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಮತ್ತು ನ್ಯಾಯ ಒದಗಿಸಲು ಎಲ್ಲ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದೆ. ರೈತರಿಗೆ ಒಳ್ಳೆಯ ಸುದ್ದಿಯನ್ನೇ ನಿಡುತ್ತೇವೆ. ಕೋರ್ಟ್ ವಿಚಾರ ಸೂಕ್ಷ್ಮವಾಗಿದ್ದು ಹುಷಾರಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಇಂದಿನ ಸಮಸ್ಯೆಯಲ್ಲ. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸಂತ್ರಸ್ತರು ಧೃತಿಗೆಡಬಾರದು ಎಂದರು.
ಸಂತ್ರಸ್ತರ ಪರವಾದ ಹೋರಾಟವನ್ನು ನಿಲ್ಲಿಸುವುದಿಲ್ಲ. ಅದಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು. ಮುಳುಗಡೆಗೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ ಹೋರಾಟ ನಡೆಯುತ್ತಿದೆ. ರೈತರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಲ್ಲ. ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ. 2015 ರೊಳಗೆ 3 ಎಕರೆ ಒಳಗೆ ಸಾಗುವಳಿ ಮಾಡುತ್ತಿರುವ ರೈತರಿಗೆ ಯಾವುದೇ ರೀತಿಯ ನೋಟಿಸ್ ನೀಡುವುದು, ತೊಂದರೆ ನೀಡದಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೂ ಎಲ್ಲ ರೀತಿಯ ಭೂ ಕಬಳಿಕೆ ಪ್ರಕರಣ ನಿರ್ವಹಿಸಲು ಜನಪ್ರತಿಧಿಗಳು, ಅಧಿಕಾರಿಗನ್ನೊಳಗೊಂಡ ಅರಣ್ಯ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.
ತುಂಗಾ ನದಿಗೆ ಕಲುಷಿತ ನೀರು ಹೋಗದಂತೆ ಕ್ರಮ ವಹಿಸಲು ಸಮಿತಿ ರಚಿಸಲಾಗುವುದು. ನದಿ ಈಗಾಗಲೇ ಸಾಕಷ್ಟು ಕಲುಷಿತವಾಗಿದೆ. ಮುಂದೆ ಆಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಕೆಟ್ಟ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ನದಿ ಸಂರಕ್ಷಣೆಗೆ ಶಾಶ್ವತ ಪರಿಹಾರದ ಕುರಿತು ಪಕ್ಷಾತೀತವಾಗಿ ಯೋಚಿಸಲಾಗುತ್ತಿದೆ. ಬೃಹತ್ ನೀರಾವರಿ ಮತ್ತು ಪಾಲಿಕೆ ಅಧಿಕಾರಿಗಳು ಈ ಕುರಿತು ಸಭೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಎಂಎಡಿಬಿ ಅಧ್ಯಕ್ಷರಾದ ಆರ್.ಎಂ ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಮಾಜಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಉಪಸ್ಥಿತರಿದ್ದರು.