ಹೊಸನಗರ : ಹುಲಿಕಲ್ ಘಾಟ್‌ನಲ್ಲಿ ₹ 4.35 ಕೋಟಿ ಮತ್ತು ₹ 1 ಕೋಟಿ ವೆಚ್ಚದಲ್ಲಿ ತಡೆಗೋಡೆ ಮತ್ತು ಇತರೆ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ತ್ವರಿತ ಮತ್ತು ಗುಣಮಟ್ಟದಿಂದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಅವರು ಮಂಗಳವಾರ ಸಂಜೆ ಹುಲಿಕಲ್ ಘಾಟ್ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿ ಪ್ರಗತಿಯಲ್ಲಿರುವ ರಿಟೇನಿಂಗ್ ವಾಲ್ (ರಕ್ಷಣಾ ಗೋಡೆ) ನಿರ್ಮಾಣ ಹಾಗೂ ಇತರೆ ರಸ್ತೆ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿ ಪರಿಶೀಲನೆ ನಡೆಸಿ ಮಾತನಾಡಿದರು.

ಘಾಟಿಯಲ್ಲಿ ಭಾರೀ ಪ್ರಮಾಣದ ವಾಹನ ಬಿಟ್ಟು ಬೇರೆ ಲಘು ವಾಹನಗಳ ಪ್ರಯಾಣಕ್ಕೆ ಈಗಾಗಲೇ ಅವಕಾಶ ಮಾಡಿಕೊಡಲಾಗಿದೆ. ಇಲಾಖೆಯಡಿ ಸ್ಥಗಿತಗೊಂಡ ಕಾಮಗಾರಿಗಳಿಗೆ ಚಾಲನೆ ನೀಡಲು ಸೂಚಿಸಿದ್ದೇನೆ.
ಶಿವಮೊಗ್ಗದ ತುಂಗಾ ಸೇತುವೆ ನಿರ್ಮಾಣಕ್ಕೆ ₹ 50 ಕೋಟಿ ಮಂಜೂರಾಗಿದ್ದು, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಈ ಕಾಮಗಾರಿ ಆರಂಭಿಸಲಾಗುವುದು. ಮಳೆಗಾಲದ ಹಿನ್ನೆಲೆಯಲ್ಲಿ ಘಾಟ್ ಪ್ರದೇಶದಲ್ಲಿ ಭೂಕುಸಿತವಾಗದಂತೆ ತಡೆಯಲು ಮತ್ತು ವಾಹನ ಸವಾರರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.

ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಸಚಿವರು, ಅಲ್ಲಿದ್ದ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಘಾಟ್ ರಸ್ತೆಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದ್ದರಿಂದ, ರಿಟೇನಿಂಗ್ ವಾಲ್ ನಿರ್ಮಾಣದಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದ ಕೊರತೆಯಾಗಬಾರದು ಎಂದು ಸೂಚನೆ ನೀಡಿದರು.
ಮಳೆಗಾಲದಲ್ಲಿ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಯಾವುದೇ ವ್ಯತ್ಯಯ ಉಂಟಾಗದಂತೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದ ಅವರು, ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಫಲಕಗಳು ಹಾಗೂ ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಕಾಣಿಸುವಂತಹ ಸೂಚಕಗಳನ್ನು ಅಳವಡಿಸಬೇಕು. ಘಾಟ್ ಪ್ರದೇಶಗಳಲ್ಲಿ ಸಂಚಾರ ಸುರಕ್ಷತೆ ನಮಗೆ ಅತ್ಯಂತ ಪ್ರಮುಖವಾಗಿದೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಮತ್ತು ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ತಿಳಿಸಿದರು.

ಇದೇ ವೇಳೆ ಸಚಿವರು ಬಾಳೆಬರೆ ಜಲಪಾತಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಗಣೇಶ್, ಅಧೀಕ್ಷಕ ಅಭಿಯಂತರರಾದ ರಮ್ಯ, ಕಾರ್ಯಪಾಲಕ ಇಂಜಿನಿಯರ್ ಸುನಿಲ್ ಕುಮಾರ್ ಮತ್ತು ಪ್ರಕಾಶ್, ಹೊಸನಗರ ತಹಸೀಲ್ದಾರ್, ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಹೊಸನಗರ ಶಾಲೆಗೆ ಭೇಟಿ :
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೊಸನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಹೊಸನಗರ ಮಾರ್ಗದಲ್ಲಿ ಹುಲಿಕಲ್ ಘಾಟ್ ಕಾಮಗಾರಿ ವೀಕ್ಷಣೆಗೆ ಹೊರಡುತ್ತಿದ್ದ ವೇಳೆಯಲ್ಲಿ ಮಾರ್ಗ ಮಧ್ಯದಲ್ಲಿ ದಿಢೀರ್ ಶಾಲೆಗೆ ಭೇಟಿ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸ್ಥಳೀಯ ನಾಯಕರೊಂದಿಗೆ ಚರ್ಚಿಸಿದರು. ಈ ವೇಳೆ ಮುಖ್ಯ ಶಿಕ್ಷಕರು ಶಾಲೆ ಮಕ್ಕಳ ಕ್ರೀಡಾ ಸಾಧನೆ ಬಗ್ಗೆ ವಿವರಿಸಿದಾಗ ಸಚಿವರು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದಿಂದ ಬೃಹತ್ ಮಟ್ಟದಲ್ಲಿ ಭಾರತ್ ಜೋಡೋ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದ್ದು, ಈ ಕ್ರೀಡಕೂಟದ ಸದುಪಯೋಗವನ್ನು ಕ್ರೀಡೆಯಲ್ಲಿ ಸಾಧನೆ ಮಾಡಿರುವ ನಿಮ್ಮ ಶಾಲೆಯ ಮಕ್ಕಳಿಗೆ ಪಡೆದುಕೊಳ್ಳುವಂತೆ ತಿಳಿಸಿದರು.

