ಹೊಸನಗರ ; 94ಸಿ ಅಥವಾ ಬಗರ್‌ಹಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರಿಗೆ ನಿಯಮಾನುಸಾರ ಹಕ್ಕುಪತ್ರ ವಿತರಣೆಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು. ಜನಸಾಮಾನ್ಯರು ಕಚೇರಿ ಅಲೆಯುವಂತೆ ಆಗಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಇಲ್ಲಿನ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಅವರು ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಣೆ ನಡೆಸಿ ಮಾತನಾಡಿದ ಅವರು, ಪ್ರತಿ ವ್ಯಕ್ತಿಗೂ ಜೀವನದಲ್ಲಿ ನಾನು ನೆಲೆ ನಿಂತಜಾಗದ ಹಕ್ಕು ಪಡೆಯಬೇಕೆನ್ನುವ ಅಧಮ್ಯ ಬಯಕೆ ಇರುತ್ತದೆ. ಹಕ್ಕುಪತ್ರ ದೊರೆತಾಗ ಆತನಿಗೆ ಆಗುವ ಸಂಭ್ರಮಕ್ಕೆ ಪಾರವಿಲ್ಲ. ತನ್ನ ಜೀವನ ಪರ್ಯಂತ ಆತ ಆ ಕ್ಷಣವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾನೆ. ಹಾಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಕ್ಕು ನೀಡುವ ಭಾಗ್ಯ ಬಂದಿರುವದಕ್ಕೆ ಸಂತಸ ಪಡಬೇಕು ಹಾಗೂ ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕು ಎಂದರು.
ಮಲೆನಾಡು ಭಾಗದಲ್ಲಿ ಬಹುತೇಕ ಜನರು ತಮ್ಮ ವಾಸದ ಮನೆಯ ಜಾಗಕ್ಕೆ ಹಕ್ಕುಪತ್ರ ಹೊಂದಿರುವುದಿಲ್ಲ. ಕಾಡಿನ ಅಂಚಿನಲ್ಲಿ ವಾಸಿಸುವವರಿಗೆ ಹಕ್ಕುಪತ್ರ ಪಡೆಯುವ ಮಹತ್ವ ಎದುರಾಗಿರಲಿಲ್ಲ. ಯಾರೂ ಒಕ್ಕಲೆಬ್ಬಿಸಬಹುದು ಎನ್ನುವ ಕಲ್ಪನೆಯೂ ಇರಲಿಲ್ಲ. ಆದರೆ ನೂರಾರು ವರ್ಷ ಬಾಳಿದ ಜಾಗ, ಮನೆಗೆ ಮಾಲೀಕತ್ವ ಸಾಬೀತು ಮಾಡಬೇಕಾದ ಸಂದರ್ಭಗಳು ಇತ್ತೀಚೆಗೆ ಒದಗಿ ಬಂದಿವೆ. ಹಕ್ಕುಪತ್ರ, ನೊಂದಣೆ ಇವು ಒಂದು ಕಾಲದಲ್ಲಿ ನಗರ ಪ್ರದೇಶಕ್ಕೆ ಮಾತ್ರ ಸೀಮಿತ ಆಗಿದ್ದವು. ಆದರೆ ಇಂದು ಹಳ್ಳಿಗಳಲ್ಲಿಯೂ ಸೂಕ್ತ ದಾಖಲಾತಿಗಳು ಅತ್ಯಗತ್ಯವಾಗಿವೆ ಎಂದರು.

ಅತಂತ್ರ ಸ್ಥಿತಿಯಲ್ಲಿರುವವರಿಗೆ ಭೂಮಿಯ ಹಕ್ಕು ದೊರೆಯಬೇಕು. ಈಗಾಗಲೇ ಹಕ್ಕುಪತ್ರ ಪಡೆದವರಿಗೆ 9&11 ಹಾಗೂ ಖಾತೆ ಏರಿಸುವ ಪ್ರಕ್ರಿಯೆ ಚುರುಕುಗೊಳ್ಳಬೇಕು. ಎಲ್ಲಾ ಅರ್ಹ ಅರ್ಜಿದಾರರಿಗೂ ಹಕ್ಕುಪತ್ರ ದೊರೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಒಂದೂ ಅರ್ಜಿಯೂ ಉಳಿಯದಂತೆ ಕಡತ ವಿಲೇ ಮಾಡಿ ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ನಗರ ಹಾಗೂ ಹುಂಚ ಹೋಬಳಿಗೆ ಸಂಬಂಧಿಸಿದ 57 ಮಂದಿಗೆ ಹಕ್ಕುಪತ್ರ ವಿತರಣೆ ನಡೆಯಿತು.
ತಹಸೀಲ್ದಾರ್ ಎಚ್.ಜೆ.ರಶ್ಮಿ ಪ್ರಾಸ್ತಾವಿಕ ಮಾತನಾಡಿದರು. ಶಿರಸ್ತೆದಾರ್ ಕಟ್ಟೆ ಮಂಜುನಾಥ್, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಶಿವಕುಮಾರ್ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಸಿದ್ಧಪ್ಪ ಲೋಹಿತ್ ಜಾಗೃತಿ ಶಾಸಕರ ಆಪ್ತ ಕಾರ್ಯದರ್ಶಿಯಾದ ಬಸವರಾಜ್ ರಾಜೇಶ್ ಮತ್ತಿತರರು ಇದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.