ಹೊಸನಗರ ; ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಕ್ಫ್ ಕಾಯ್ದೆಗೆ ತಿದ್ದುಪಡಿ ಕುರಿತಂತೆ ಇತ್ತೀಚೆಗೆ ಲೋಕಸಭೆ ಹಾಗೂ ರಾಜ್ಯಸಭೆ ಸದನಗಳಲ್ಲಿ ಸುಮಾರು 13 ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆದು ಎರಡು ಸದನಗಳಲ್ಲಿ ಕಾಯ್ದೆ ತಿದುಪಡಿಗೆ ಅನುಮೋದನೆ ದೊರೆತಿತ್ತು. ಇಂದು ಅದಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತಿದ್ದು, ಇದು ಕಾಯ್ದೆಯಾಗಿ ರೂಪುಗೊಂಡಿದೆ ಎಂದು ಮಾಜಿ ಗೃಹ ಸಚಿವ, ಶಾಸಕ ಅರಗ ಜ್ಞಾನೇಂದ್ರ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ, ಸಂವಿಧಾನ ಬಾಹಿರ ಕಾಯ್ದೆಗಳ ಮೂಲಕ ಒಂದು ಸಮುದಾಯದ ಒಲೈಕೆ, ಮತಕ್ಕಾಗಿ ರಾಜಕಾರಣದ ಮೂಲಕ ತುಷ್ಠಿಕರಿಸುವುದಕ್ಕೆ ಈ ಕಾಯ್ದೆ ಜಾರಿಗೊಳ್ಳುವ ಮೂಲಕ ಇತಿಶ್ರೀ ಹಾಡಲಾಗಿದೆ ಎಂದರು. ಈ ಕಾರಣಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಅಮಿತ್ ಶಾ ಅವರಿಗೆ ಅಭಿನಂದಿಸಿದ ಶಾಸಕ ಆರಗ, ಜಾತ್ಯತೀತ ಎಂಬುದು ಒಂದು ಸಮುದಾಯದ ತುಷ್ಠಿಕರಣಕ್ಕೆ ಮಾತ್ರ ಮೀಸಲಾಗಬಾರದು. ಇಲ್ಲಿ ಎಲ್ಲರೂ ಒಗ್ಗೂಡಿ ಬದುಕಬೇಕಿದೆ. ದೇಶವು ಸರ್ವಧರ್ಮಗಳ ಶಾಂತಿಯ ತೋಟದಂತಿರಬೇಕು ಎಂತಾದರೆ, ಇಂತಹ ಕಾಯ್ದೆಗಳನ್ನು ಜಾರಿಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸರಿಯಾದ ಹೆಜ್ಜೆ ಇಟ್ಟಿದೆ ಎಂದರು.