ರಿಪ್ಪನ್‌ಪೇಟೆ ; ಶಾಸಕ ಬೇಳೂರು ಗೋಪಾಲಕೃಷ್ಣರಿಂದ 20 ಕೋಟಿ ರೂ. ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ

Written by malnadtimes.com

Published on:

RIPPONPETE ; ಯಡೇಹಳ್ಳಿಯಿಂದ ರಿಪ್ಪನ್‌ಪೇಟೆ ವರೆಗಿನ ಸಂಪರ್ಕ ರಸ್ತೆಗೆ 20 ಕೋಟಿ ರೂ. ವೆಚ್ಚದ 8 ಕಿ.ಮೀ. ದೂರದ ರಾಜ್ಯ ಹೆದ್ದಾರಿಯ ಅಗಲೀಕರಣ ಕಾಮಗಾರಿಗೆ ಶಾಸಕ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು.

WhatsApp Group Join Now
Telegram Group Join Now
Instagram Group Join Now

ನಂತರ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಶಂಕುಸ್ಥಾಪನಾ ಸಮಾರಂಭದ ಸಭೆಯಲ್ಲಿ ಮಾತನಾಡಿ, ಟೀಕೆ ಟಿಪ್ಪಣಿಗಳು ಸತ್ತುಹೋಗುತ್ತವೆ. ಮಾಡಿದ ಅಭಿವೃದ್ದಿ ಕಾರ್ಯಗಳು ಮಾತನಾಡುವಂತೆ ಮಾಡುತ್ತವೆ. ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರ ದಿವಾಳಿಯಾಗಿದೆ ಎಂದು ವಿರೋಧ ಪಕ್ಷದವರು ಬಾಯಿ ಬಡಿದುಕೊಳ್ಳುತ್ತಿದ್ದು ಇದರಿಂದ ನಮ್ಮ ಸರ್ಕಾರಕ್ಕೆ ಇನ್ನಷ್ಟು ಅಭಿವೃದ್ಧಿಗೆ ಹಣ ಹರಿದು ಬರುತ್ತಿರುವುದರೊಂದಿಗೆ ಗ್ಯಾರಂಟಿ ಯೋಜನೆಯಿಂದಾಗಿ ರೈತ ಮಹಿಳೆಯರು ಬಡವರು ದೀನ ದಲಿತರು ಉದ್ದಾರವಾಗುವಂತಾಗಿದೆ. ಬಡವರ ಕಣ್ಣೀರು ಹಾಕಿಸುವ ಮೂಲಕ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಲಕ್ಷಾಂತರ ಕೋಟಿ ರೂ. ಸಾಲ ಮಾಡಿ ಖಜಾನೆ ಖಾಲಿ ಮಾಡಿತ್ತು ನಮ್ಮ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಲವನ್ನು ತೀರಿಸುವ ಮೂಲಕ ಅಭಿವೃದ್ದಿಗೂ ಹಣದ ಹೊಳೆ ಹರಿಸುತ್ತಿದ್ದಾರೆಂದರು.

ಕೊರೊನಾ ಕಾರಣ ಹೇಳಿಕೊಂಡು ಹಳೆಯ ಸರ್ಕಾರಿ ಬಸ್‌ಗಳನ್ನು ಓಡಿಸುತ್ತಿದ್ದು ಮೂರುಪಟ್ಟು ಬೆಲೆ ಏರಿಸಿ ಬಡವವರಿಗೆ ಬರೆ ಎಳೆದಿದ್ದು ಈಗಿನ ಸರ್ಕಾರ 3 ಸಾವಿರಕ್ಕೂ ಅಧಿಕ ಸರ್ಕಾರಿ ಬಸ್‌ಗಳನ್ನು ಖರೀದಿಸಿ ಹಂತಹಂತವಾಗಿ ಓಡಾಡಲು ರಾಜ್ಯದ ಎಲ್ಲಾ ಡಿಪೋಗಳಿಗೆ ಕಳುಹಿಸುತ್ತಿದ್ದಾರೆಂದರು.

ಅದರಂತೆ ನನ್ನ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಈಗಾಗಲೇ 9 ಹೊಸ ಬಸ್‌ಗಳು ಬಂದಿದ್ದು ಸಾಗರದಿಂದ ಮಣಿಪಾಲ ಮಂಗಳೂರಿಗೆ ಹಾಗೂ ಸಾಗರದಿಂದ ನೇರ ತಿರುಪತಿಗೆ ಬಸ್‌ಗಳನ್ನು ಬಿಡಲಾಗಿದೆ. ಇನ್ನೂ ಸಾಗರ, ಆನಂದಪುರ, ರಿಪ್ಪನ್‌ಪೇಟೆ ಮಾರ್ಗ ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ನೇರ ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.

ಈಗಾಗಲೇ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಸರ್ಕಾರ ಸ್ಪಂದಿಸಿದ್ದು ಸುಪ್ರೀಂ ಕೋರ್ಟ್‌ನಲ್ಲಿ ರೈತರ ಪರವಾಗಿ ಪೂರಕ ದಾಖಲೆಗಳನ್ನು ಸಲ್ಲಿಸುವ ಮೂಲಕ ಶೀಘ್ರದಲ್ಲಿ ರೈತರ ಪರ ತೀರ್ಪು ಬರುವ ಎಲ್ಲಾ ಲಕ್ಷಣಗಳು ಇದೆ ಎಂದು ವಿವರಿಸಿ ಯಾವುದೇ ಕಾರಣಕ್ಕೂ ಸಂತ್ರಸ್ತ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ದೈರ್ಯ ತುಂಬಿದರು.

ವರ್ಣರಂಜಿತ ನಾಯಕ ದಿ.ಎಸ್.ಬಂಗಾರಪ್ಪನವರು ಬಡವರ ಕಣ್ಣೀರು ಒರೆಸುವ ಮೂಲಕ ಅಭಿವೃದ್ದಿಗಿಂತ ಬಡವರ ಸೇವೆ ಮುಖ್ಯ ಎಂದು ಹೇಳಿದಂತೆ ನಾನು ಅವರ ಗರಡಿಯಲ್ಲಿ ಬೆಳೆದು ಬಂದಂತಹ ವ್ಯಕ್ತಿ ಅವರ ಸಾರ್ವಜನಿಕ ಕಾರ್ಯಗಳೇ ನನಗೆ ಸ್ಪೂರ್ತಿಯೆಂದು ಹೇಳಿ ಬಡವರ ಸೇವೆಯೇ ನನಗೆ ಶ್ರೀರಕ್ಷೆ ಎಂದರು.

ಈಗಾಗಲೇ ಚಕ್ರಾನಗರದಿಂದ ಸೂಡೂರು ವರೆಗಿನ ಎಲ್ಲ ಗ್ರಾಮಗಳಿಗೂ ಸುಮಾರು 418 ಕೋಟಿ ರೂ‌. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಿಪ್ಪನ್‌ಪೇಟೆ ನಗರಕ್ಕೆ 36 ಕೋಟಿ ರೂ‌. ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಪೂರ್ಣ ಹಂತದಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜನರಿಗೆ ಈ ಸೌಲಭ್ಯ ದೊರೆಯಲಿದ್ದು 7 ವಾರ್ಡ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿ ಈಗಾಗಲೇ ಸಾಗರ ತೀರ್ಥಹಳ್ಳಿ ರಸ್ತೆ ಅಗಲೀಕರಣ ಕಾಮಗಾರಿಗೆ 5.85 ಕೋಟಿ ರೂ. ಆನುದಾನ ಬಿಡುಗಡೆಯಾಗಿ ಕಾಮಗಾರಿ ಕಾರ್ಯ ಭರದಿಂದ ಸಾಗಿದೆ.

ಇನ್ನೂ ಶಿವಮೊಗ್ಗ ಹೊಸನಗರ ರಸ್ತೆ ಅಗಲೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿ ಸಚಿವರೊಂದಿಗೆ ಸಹ ಚರ್ಚಿಸಲಾಗಿದ್ದು ಮುಂದಿನ ಬಜೆಟ್‌ನಲ್ಲಿ ಹೆಚ್ಚು ಹಣವನ್ನು ಇಡಿಸಿ ಕೊಡುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆಂದ ಅವರು ಅಭಿವೃದ್ದಿಗೆ ಹಣಕಾಸಿ ಕೊರತೆಯಿಲ್ಲ ಎಂದು ವಿವರಿಸಿದರು.

ಸಚಿವರಾಗುವ ಕಾಲ ದೂರವಿಲ್ಲ :

ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಸಚಿವರಾಗವ ಕಾಲ ದೂರವಿಲ್ಲ ಎಂದು ಎಂ.ಎಲ್.ಸಿ.ಬಲ್ಕಿಸ್‌ಬಾನು ಹೇಳುತ್ತಿದ್ದಂತೆ ಸಭಿಕರ ಚಪ್ಪಾಳೆ, ಶಿಳ್ಳೆ ಮುಗಿಲು ಮುಟ್ಟುವಂತೆ ಮಾಡಿತು. ಮಾತು ಮುಂದುವರಿಸಿ ಸಿದ್ದರಾಮಯ್ಯ ಶಿವಕುಮಾರ ನೇತೃತ್ವದ ಸರ್ಕಾರ ಚುನಾವಣೆ ಪ್ರಣಾಳಿಕೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸುವ ಮೂಲಕ ಸರ್ಕಾರದ ಖಜಾನೆಯನ್ನು ತುಂಬಿಸಿಕೊಳ್ಳುವುದರೊಂದಿಗೆ ಬಲಿಷ್ಟ ಸರ್ಕಾರವಾಗಿ ಜನಮನಗೆದ್ದಿದೆ ಎಂದರು.

ಈ ಸಭೆಯಲ್ಲಿ ಮಲೆನಾಡು ಪ್ರದೇಶಾಭಿವ್ದದ್ದಿ ಮಂಡಳಿಯ ಅಧ್ಯಕ್ಷ ಮಂಜುನಾಥಗೌಡ, ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಾಮಚಂದ್ರ, ಶಿಮುಲ್ ಅಧ್ಯಕ್ಷ ವಿದ್ಯಾಧರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಈ.ಮಧುಸೂದನ್, ಎನ್.ಚಂದ್ರೇಶ್, ಆಸಿಫ್, ಗಣಪತಿ ಗವಟೂರು, ಪ್ರಕಾಶ ಪಾಲೇಕರ್, ಸಾರಾಭಿ, ವೇದಾವತಿ, ಅನುಪಮ ರಾಕೇಶ್, ವಿನೋಧ, ಮಹಾಲಕ್ಷ್ಮಿ, ಪರಮೇಶ್, ತಹಶೀಲ್ದಾರ್ ರಶ್ಮಿ ಹಾಲೇಶ್, ಸುಬ್ರಹ್ಮಣ್ಯ ಮಾಸ್ತಿಕಟ್ಟೆ, ಉಭೇದುಲ್ಲಾ ಷರೀಫ್, ಅಮ್ಮೀರ್‌ಹಂಜಾ, ರವೀಂದ್ರ ಕೆರೆಹಳ್ಳಿ ಇನ್ನಿತರರು ಹಾಜರಿದ್ದರು.

Leave a Comment