ಹೊಸನಗರ ; ತರಬೇತಿ ನೀಡುವ ವೇಳೆ ತಮ್ಮದೇ ಪ್ಯಾರಾಚೂಟ್ ಸರಿಯಾದ ಸಮಯಕ್ಕೆ ತೆರೆದುಕೊಳ್ಳದ ಪರಿಣಾಮ ಭಾರತೀಯ ವಾಯುಸೇವೆಯ ತರಬೇತುದಾರ ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ಮಂಜುನಾಥ್ (36) ನೆಲಕ್ಕೆ ಅಪ್ಪಳಿಸಿ ಸ್ಥಳದಲ್ಲೇ ಸಾವಿಗೀಡಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರ ವಾಯುಸೇನ ಪಿಟಿಎಸ್ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಇವರ ನಿಧನಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ತೀವ್ರ ಸಂತಾಪ ಸೂಚಿಸಿದ್ದು, ‘ವಾಯುಪಡೆಯ ವಾರೆಂಟ್ ಅಧಿಕಾರಿಯಾದ ಮಂಜುನಾಥ ಜಿ.ಎಸ್ ಇವರು ನಿಧನರಾದ ಸುದ್ದಿ ತಿಳಿದು ತುಂಬಾ ದುಃಖವಾಯಿತು. ಅವರ ಅಕಾಲಿಕ ನಿಧನ ಇಡೀ ನಾಡಿಗೆ ತುಂಬಲಾರದ ನಷ್ಟವಾಗಿದೆ. ಇವರ ತಂದೆ-ತಾಯಿಯವರು ಕೃಷಿಕ ಕುಟುಂಬದವರಾಗಿದ್ದು ಅವರು ತಂದೆ-ತಾಯಿ, ಪತ್ನಿ, ಸಹೋದರ ಮತ್ತು ಇಬ್ಬರು ಸಹೋದರಿಯರನ್ನು ಬಿಟ್ಟು ಹೋಗಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಹಾಗೂ ಬಂಧು-ಬಳಗಕ್ಕೆ ಆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.