ಪಾರ್ಶ್ವವಾಯುಗೆ ತುತ್ತಾಗಿದ್ದ ಚಿರತೆ ‘ಭದ್ರಾ’ಗೆ ಎಂಆರ್‌ಐ ಸ್ಕ್ಯಾನಿಂಗ್

Written by Koushik G K

Published on:

ಶಿವಮೊಗ್ಗ -ಪಾರ್ಶ್ವವಾಯುಗೆ ತುತ್ತಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ **ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಚಿರತೆ ಭದ್ರಾ (15) ಗೆ ಚಿಕಿತ್ಸೆಯ ಭಾಗವಾಗಿ ಶುಕ್ರವಾರ ತಡರಾತ್ರಿ ಇಲ್ಲಿನ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್ ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಳೆದ ಕೆಲ ದಿನಗಳಿಂದ ಭದ್ರಾಗೆ ಕಾಲುಗಳ ಸ್ವಾಧೀನವಿಲ್ಲದ ಕಾರಣ ಸರಿಯಾಗಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಬೆನ್ನುಹುರಿಗೆ ಪೆಟ್ಟು ಬಿದ್ದಿದೆಯೇ ಅಥವಾ ಯಾವುದೇ ಸೋಂಕಿನಿಂದ ಅನಾರೋಗ್ಯ ಪೀಡಿತವಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ವನ್ಯಜೀವಿ ವೈದ್ಯರು ಎಂಆರ್‌ಐ ಸ್ಕ್ಯಾನಿಗೆ ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಂಜಪ್ಪ ಆಸ್ಪತ್ರೆಯ ಆಡಳಿತವು ಎಂಆರ್‌ಐ ಪರೀಕ್ಷೆಗೆ ಅನುಮತಿ ನೀಡಿತು.

ಹಗಲು ವೇಳೆಯಲ್ಲಿ ರೋಗಿಗಳು ಹಾಗೂ ಸಿಬ್ಬಂದಿಗೆ ಆತಂಕ ಉಂಟಾಗಬಹುದೆಂಬ ಕಾರಣದಿಂದ, ಮೃಗಾಲಯ ಪ್ರಾಧಿಕಾರವು ತಡರಾತ್ರಿಯಲ್ಲೇ ಚಿರತೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿತು. ಅದರಂತೆ ಹುಲಿ–ಸಿಂಹ ಧಾಮದ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ವಿ. ಅಮರಾಕ್ಷರ ಹಾಗೂ ವನ್ಯಜೀವಿ ವೈದ್ಯ ಡಾ. ಮುರಳಿಮೋಹನ್ ಅವರ ನೇತೃತ್ವದ ತಂಡ ಚಿರತೆಯನ್ನು ಆಸ್ಪತ್ರೆಗೆ ಕರೆತಂದಿತು.

ಸುಮಾರು ಒಂದೂವರೆ ಗಂಟೆಗಳ ಕಾಲ ಅರೆವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿದ ಬಳಿಕ ಭದ್ರಾಗೆ ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು. ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ತಜ್ಞರು ಹಾಗೂ ಸಿಬ್ಬಂದಿ ಈ ವಿಶಿಷ್ಟ ಚಿಕಿತ್ಸಾ ಪ್ರಕ್ರಿಯೆಗೆ ಸಹಕರಿಸಿದರು.

ಪರೀಕ್ಷಾ ವರದಿಯಲ್ಲಿ ಭದ್ರಾಗೆ ವಯೋಸಹಜವಾಗಿ ಪಾರ್ಶ್ವವಾಯು ತಗುಲಿರುವುದು ದೃಢಪಟ್ಟಿದ್ದು, ಯಾವುದೇ ಪೆಟ್ಟು ಅಥವಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. “ಚಿರತೆಯ ಆರೋಗ್ಯ ಸ್ಥಿರವಾಗಿದ್ದು, ಹುಲಿ–ಸಿಂಹ ಧಾಮದ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆಯನ್ನು ನೀಡಲಾಗುತ್ತಿದೆ” ಎಂದು ವನ್ಯಜೀವಿ ವೈದ್ಯ ಡಾ. ಮುರಳಿಮೋಹನ್ ಮಾಹಿತಿ ನೀಡಿದ್ದಾರೆ.

ಸ್ವ-ಉದ್ಯೋಗದಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ : ಶಾಸಕ ಬೇಳೂರು ಗೋಪಾಲಕೃಷ್ಣ ಸಲಹೆ

Leave a Comment