ಶಿವಮೊಗ್ಗ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳಾ ವಾರ್ಡ್‌ಗಳು ಹಾಗೂ ಆಸ್ಪತ್ರೆಯ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.
ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ತೆರಳಿದ ಅವರು ರೋಗಿಗಳ ಆರೋಗ್ಯ ವಿಚಾರಿಸಿ, ಔಷಧಿ ಲಭ್ಯತೆ, ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕುರಿತು ನೇರವಾಗಿ ಮಾಹಿತಿ ಪಡೆದರು.
ಸುಮಾರು 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳು ಸಿಗದೆ ಹೊರಗಿನಿಂದ ಖರೀದಿಸಬೇಕಾಗುತ್ತಿದೆ ಎಂದು ಅಧ್ಯಕ್ಷರ ಗಮನಕ್ಕೆ ತಂದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನಾಗಲಕ್ಷ್ಮಿ ಚೌಧರಿ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಹೊರಗಿನಿಂದ ಔಷಧಿ ತರಿಸಬೇಕಾದ ಪರಿಸ್ಥಿತಿ ಬರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಈ-ಫಾರ್ಮಸಿ ಹಾಗೂ ಡಿಜಿಟಲ್ ವ್ಯವಸ್ಥೆ ಇರುವುದರಿಂದ ವೈದ್ಯರು ಬರೆದಿರುವ ಔಷಧಿ, ಅದರ ಲಭ್ಯತೆ ಹಾಗೂ ವಿತರಣೆಯ ವಿವರಗಳು ಸರಿಯಾಗಿ ದಾಖಲಾಗಬೇಕು. ಔಷಧಿ ವಿತರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಎಂದು ನಿರ್ದೇಶನ ನೀಡಿದರು.
ಇದೇ ವೇಳೆ ಡಯಾಲಿಸಿಸ್ ಚಿಕಿತ್ಸೆಗೆ ಬಂದಿದ್ದ ರೇಣುಕಾ ಎಂಬ ರೋಗಿ, ಎಪಿಎಲ್ ಕಾರ್ಡ್ ಇರುವ ಕಾರಣದಿಂದ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಬಡ ಮಹಿಳೆಯಿಂದ ಡಯಾಲಿಸಿಸ್‌ಗೆ ಹಣ ಕೇಳಲಾಗಿದೆ ಎಂಬ ಆರೋಪವೂ ಈ ವೇಳೆ ಕೇಳಿಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಧ್ಯಕ್ಷೆ, ಮಾನವೀಯ ದೃಷ್ಟಿಯಿಂದ ರೋಗಿಗೆ ಸಾಧ್ಯವಾದಷ್ಟು ನೆರವು ನೀಡಬೇಕು. ಸೂಕ್ತ ದಾಖಲೆ ಹಾಗೂ ಸಾಕ್ಷ್ಯವಿಲ್ಲದೆ ತಕ್ಷಣ ಯಾರ ಮೇಲೆಯೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವಾದರೂ, ಇಂತಹ ದೂರುಗಳು ಮರುಕಳಿಸದಂತೆ ಆಸ್ಪತ್ರೆಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು. ಯಾವುದೇ ಸಂದರ್ಭದಲ್ಲಾದರೂ ನೀರಿನ ಪೂರೈಕೆ ವ್ಯತ್ಯಯವಾದರೆ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

