ಶಿವಮೊಗ್ಗ : ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಶನಿವಾರ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ, ಮಹಿಳೆಯರಿಗೆ ಲಭ್ಯವಿರುವ ಸೌಲಭ್ಯಗಳು ಮತ್ತು ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.

ಮೆಗ್ಗಾನ್ ರೋಗಿಗಳೊಂದಿಗೆ ಸಂವಾದ:
ಮಹಿಳಾ ಜನರಲ್ ವಾರ್ಡ್‌ಗೆ ಭೇಟಿ ನೀಡಿ, ವೈದ್ಯರ ಲಭ್ಯತೆ, ಉಚಿತ ಔಷಧ, ಶೌಚಾಲಯಗಳ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ರೋಗಿಗಳಿಂದಲೇ ನೇರವಾಗಿ ಮಾಹಿತಿ ಪಡೆದುಕೊಂಡರು.
ಬಡ ಮಹಿಳೆಗೆ ನೆರವು:
ಮಗನನ್ನು ಕಳೆದುಕೊಂಡು, ಎಪಿಎಲ್ ಕಾರ್ಡ್‌ನಿಂದಾಗಿ ಡಯಾಲಿಸಿಸ್‌ಗೆ ಪರದಾಡುತ್ತಿದ್ದ ಮಹಿಳೆಯ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಅವರು, ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.
ಹೊರಗಿನ ಔಷಧಿಗೆ ನಿರ್ಬಂಧ:
ರೋಗಿಗಳಿಗೆ ಯಾವುದೇ ಕಾರಣಕ್ಕೂ ಹೊರಗಿನಿಂದ ಔಷಧ ತರಲು ಚೀಟಿ ಬರೆದುಕೊಡುವಂತಿಲ್ಲ. ಆಸ್ಪತ್ರೆಯ ಇ-ಫಾರ್ಮಸಿಯಲ್ಲೇ ಔಷಧಿ ವಿತರಿಸಲು ಕಟ್ಟುನಿಟ್ಟಿನ ತಾಕೀತು ಮಾಡಿದರು.

ವರದಿಗಳ ಡಿಜಿಟಲೀಕರಣ:
ಲ್ಯಾಬ್ ಪರೀಕ್ಷೆಗಳಿಗಾಗಿ ರೋಗಿಗಳು ಅಲೆದಾಡುವುದನ್ನು ಹಾಗೂ ವರದಿ ವಿಳಂಬವಾಗುವುದನ್ನು ತಪ್ಪಿಸಲು, ವರದಿಗಳನ್ನು ಡಿಜಿಟಲೈಸ್ ಮಾಡಲು ನಿರ್ದೇಶನ ನೀಡಿದರು.
ಮೂಲಸೌಕರ್ಯ ಮತ್ತು ನೈರ್ಮಲ್ಯದ ಬಗ್ಗೆ ಎಚ್ಚರಿಕೆ
ಕೌಂಟರ್‌ಗಳ ಹೆಚ್ಚಳ:
ಗರ್ಭಿಣಿಯರು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ನೋಂದಣಿ ಹಾಗೂ ಚಿಕಿತ್ಸಾ ಕೌಂಟರ್‌ಗಳ ಸಂಖ್ಯೆ ಹೆಚ್ಚಿಸುವಂತೆ ಸೂಚಿಸಿದರು.
ಸ್ವಚ್ಛತೆಗೆ ಆದ್ಯತೆ :
ವಾರ್ಡ್‌ಗಳಲ್ಲಿನ ಧೂಳು, ಮುರಿದ ಕಿಟಕಿಗಳನ್ನು ತಕ್ಷಣವೇ ಸರಿಪಡಿಸಲು ಹಾಗೂ ಆಸ್ಪತ್ರೆಯ ನೈರ್ಮಲ್ಯಕ್ಕೆ ಪ್ರಥಮ ಆದ್ಯತೆ ನೀಡಲು ಆದೇಶಿಸಿದರು.

ಹೊಸ ಆಸ್ಪತ್ರೆ ಆರಂಭ:
ತಾಯಿ ಮತ್ತು ಮಕ್ಕಳಿಗಾಗಿ ನಿರ್ಮಿಸಿರುವ ನೂತನ ‘ಎಂಸಿಎಚ್’ ಆಸ್ಪತ್ರೆಯನ್ನು ಆದಷ್ಟು ಬೇಗ ಕಾರ್ಯಾರಂಭ ಮಾಡುವಂತೆ ವೈದ್ಯಕೀಯ ಅಧೀಕ್ಷಕರಿಗೆ ತಿಳಿಸಿದರು.
ಮಹಿಳಾ ಪೊಲೀಸ್ ಠಾಣೆ ವೀಕ್ಷಣೆ :
ದೂರುಗಳಿಗೆ ತ್ವರಿತ ನ್ಯಾಯ:
ಠಾಣೆಗೆ ಬರುವ ಮಹಿಳೆಯರ ಕುಂದುಕೊರತೆಗಳಿಗೆ ತಕ್ಷಣವೇ ಸ್ಪಂದಿಸಿ, ತ್ವರಿತವಾಗಿ ನ್ಯಾಯ ಒದಗಿಸುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು.
ಸಹಾಯವಾಣಿ ಪ್ರದರ್ಶನ:
ಠಾಣೆಯ ಪ್ರವೇಶ ದ್ವಾರದಲ್ಲಿ ಮಹಿಳಾ ಸಹಾಯವಾಣಿ ಸಂಖ್ಯೆಗಳು ಹಾಗೂ ಕ್ಯೂಆರ್ (QR) ಕೋಡ್ ಅನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಅಳವಡಿಸಲು ನಿರ್ದೇಶಿಸಿದರು.

ಆಂತರಿಕ ದೂರು ಸಮಿತಿ:
ಲೈಂಗಿಕ ಕಿರುಕುಳ ತಡೆ ಕಾಯ್ದೆಯಡಿ ರಚಿಸಲಾದ ಸಮಿತಿಯು ಪ್ರತಿ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಸೇರಿ, ಮಹಿಳಾ ಸಿಬ್ಬಂದಿಗೆ ಸುರಕ್ಷಿತ ವಾತಾವರಣ ಕಲ್ಪಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಿಮ್ಸ್ ನಿರ್ದೇಶಕ ಡಾ.ರಮೇಶ್ ಬಾಬು, ಡಿಎಚ್‌ಒ ಡಾ.ನಟರಾಜ್, ಅಧೀಕ್ಷಕ ಡಾ.ತಿಮ್ಮಪ್ಪ ಸೇರಿದಂತೆ ಪೊಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.

