ಶಿವಮೊಗ್ಗ: ಕಸ್ತೂರಿ ರಂಗನ್ ಸಮಿತಿ ವರದಿಯಲ್ಲಿ ಜನವಸತಿ ಪ್ರದೇಶಗಳು, ಕೃಷಿ ಭೂಮಿ ಹಾಗೂ ವನವಾಸಿಗಳ ಪ್ರದೇಶಗಳನ್ನು ಹೊರತುಪಡಿಸಿ ಪರಿಷ್ಕರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಜಿಲ್ಲಾ ಮಟ್ಟದ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಂಸದ ಬಿ.ವೈ. ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಸ್ಥಳೀಯ ಪರಿಸ್ಥಿತಿ ಮತ್ತು ಜನರ ಜೀವನ ವಾಸ್ತವವನ್ನು ಸರಿಯಾಗಿ ಪರಿಗಣಿಸದೇ ವರದಿ ರೂಪಿಸಲಾಗಿದೆ ಎಂದು ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಯ 447 ಗ್ರಾಮಗಳು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುವ ಸಾಧ್ಯತೆ ಇರುವುದರಿಂದ, ರೈತರ ಕೃಷಿ ಚಟುವಟಿಕೆಗಳು, ಜನವಸತಿ ಪ್ರದೇಶಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ತೊಂದರೆ ಉಂಟಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ಮರುಸರ್ವೆ ನಡೆಸಬೇಕು. ಜನರು ವಾಸಿಸುವ ಪ್ರದೇಶಗಳು, ಕೃಷಿ ಭೂಮಿ ಮತ್ತು ವನವಾಸಿಗಳ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕೇವಲ ನೈಜ ಅರಣ್ಯ ಪ್ರದೇಶಗಳ ರಕ್ಷಣೆಗೆ ಮಾತ್ರ ಒತ್ತು ನೀಡಬೇಕು ಎಂದು ರಾಘವೇಂದ್ರ ಹೇಳಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಮಲೆನಾಡಿನ ಜನರು ಪೀಳಿಗೆಯಿಂದ ಕೃಷಿ ಹಾಗೂ ಗ್ರಾಮೀಣ ಬದುಕಿನ ಮೇಲೆ ಅವಲಂಬಿತರಾಗಿದ್ದಾರೆ. ಸಾಂಪ್ರದಾಯಿಕ ಕೃಷಿ, ಮನೆ ನಿರ್ಮಾಣ ಮತ್ತು ಮೂಲಸೌಕರ್ಯಗಳಿಗೆ ಅನಗತ್ಯ ನಿರ್ಬಂಧ ಬಾರದಂತೆ ಮಾನವೀಯ ನೆಲೆಯಲ್ಲಿ ವರದಿಯನ್ನು ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿಯನ್ನೂ ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.
ಏತ ನೀರಾವರಿ ಯೋಜನೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು. ರೈತರಿಗೆ ನೀರು, ವಿದ್ಯುತ್ ಮತ್ತು ಕೃಷಿ ಸಂಬಂಧಿತ ಸಮಸ್ಯೆಗಳಲ್ಲಿ ವಿಳಂಬವಾಗದಂತೆ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಲಾಯಿತು.

