ಶಿವಮೊಗ್ಗ : ಅಧಿಸೂಚಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯಿಂದ ಜಮೀನು ಮಂಜೂರು ಪಡೆದುಕೊಂಡಿದ್ದ ರೈತರು ಇದೀಗ ತಮ್ಮ ಭೂಮಿಯ ಹಕ್ಕನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಜಮೀನುಗಳನ್ನು ಮರಳಿ ಅರಣ್ಯ ಇಲಾಖೆಯ ಸುಪರ್ದಿಗೆ ತಂದು, ಪಹಣಿ (ಆರ್‌ಟಿಸಿ) ಮತ್ತು ಮ್ಯುಟೇಷನ್ ದಾಖಲೆಗಳಲ್ಲಿ ಅರಣ್ಯ ಪ್ರದೇಶವೆಂದು ನಮೂದಿಸಲು ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ತೀವ್ರಗೊಂಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಶೇ. 74ರಿಂದ 87ರಷ್ಟು ಆರ್‌ಟಿಸಿ ಬದಲಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ನಾಲ್ವರು ಡಿಸಿಎಫ್ ಅಧಿಕಾರಿಗಳು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟಿದೆ. ಆದರೆ, ಮೂಲ ಪ್ರಕರಣವು ಈಗ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ವಿಸ್ತರಣೆಯಾಗಿದ್ದು, ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ.
ಹೈಕೋರ್ಟ್‌ನಲ್ಲಿ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) :
ಉಳಿದ ಅರಣ್ಯ ಭೂಮಿಯ ಪಹಣಿ ಬದಲಾವಣೆ (ಇಂಡೀಕರಣ) ಪ್ರಕ್ರಿಯೆಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಹೊಸನಗರ ಜನ ಸಂಗ್ರಾಮ ಪರಿಷತ್‌ನ ಪುಣಜೆ ಗಿರೀಶ್ ಆಚಾರ್ ಎಂಬುವವರು ಏಪ್ರಿಲ್ 15, 2026ರಂದು ಹೈಕೋರ್ಟ್‌ಗೆ ಹೊಸ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಅಕ್ಟೋಬರ್ 7ಕ್ಕೆ ನಿಗದಿಪಡಿಸಿದೆ.
ಉಪವಿಭಾಗಾಧಿಕಾರಿ (ಎಸಿ) ಕಚೇರಿಯಿಂದ ವಿಳಂಬದ ಆರೋಪ:
1910ರ ಆಸುಪಾಸಿನಿಂದ ಅರಣ್ಯವೆಂದು ಘೋಷಣೆಯಾಗಿರುವ ಪ್ರದೇಶಗಳಲ್ಲಿ ನೀಡಲಾದ ಸುಮಾರು 31,395 ಎಕರೆ ಭೂಮಿಯ ಮಂಜೂರಾತಿ ರದ್ದಾಗುವ ಅಪಾಯವಿದೆ. ಈ ಮಂಜೂರಾತಿಗಳನ್ನು ರದ್ದುಗೊಳಿಸುವಂತೆ ಕೋರಿ ಅರಣ್ಯ ಇಲಾಖೆಯು ಉಪವಿಭಾಗಾಧಿಕಾರಿಗಳಿಗೆ 5,258 ಮೇಲ್ಮನವಿಗಳನ್ನು ಸಲ್ಲಿಸಿದೆ. ಆದರೆ, ಎಸಿ ಕಚೇರಿಯಲ್ಲಿ ಈ ಪ್ರಕರಣಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸದೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಹೊಸ ಅರ್ಜಿಯಲ್ಲಿ ಆರೋಪಿಸಲಾಗಿದೆ.
1969ರ ಕರ್ನಾಟಕ ಅರಣ್ಯ ನಿಯಮಗಳ ಪ್ರಕಾರ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಅಧಿಸೂಚಿತ ಅರಣ್ಯ ಪ್ರದೇಶಗಳ ಆರ್.ಟಿ.ಸಿ. ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನ್ಯಾಯಾಲಯದ ನಿರ್ದೇಶನ ಕೋರಲಾಗಿದೆ.
ಕೇಂದ್ರ ಪರಿಸರ ಸಚಿವಾಲಯದ ಮಧ್ಯಪ್ರವೇಶ ಮತ್ತು ಅಂಕಿ-ಅಂಶಗಳು :
ಅರಣ್ಯ ಭೂಮಿ ವಿವಾದವನ್ನು ‘ನಿಯಮಬಾಹಿರ ಮಂಜೂರಾತಿ’ ಮತ್ತು ‘ಒತ್ತುವರಿ’ ಎಂದು ಎರಡು ವಿಭಾಗಗಳಾಗಿ ವಿಂಗಡಿಸಿ ಪರಿಶೀಲಿಸಲಾಗುತ್ತಿದೆ.
ರಾಜ್ಯದ ಒಟ್ಟು ಅಧಿಸೂಚಿತ ಅರಣ್ಯ ಪ್ರದೇಶ (2022-25ರ ವರದಿ) 33,23,854.98 ಹೆ. ಆರಂಭದಲ್ಲಿ ಗುರುತಿಸಲಾಗಿದ್ದ ಡೀಮ್ಡ್ ಅರಣ್ಯ ಪ್ರದೇಶ. 9,94,881.00 ಹೆ. ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಪರಿಷ್ಕೃತ ಪಟ್ಟಿಯಲ್ಲಿರುವ ಡೀಮ್ಡ್ ಅರಣ್ಯ 3,30,186.93 ಹೆ. ಆಗಿದ್ದು, ಡೀಮ್ಡ್ ಅರಣ್ಯ ಪಟ್ಟಿಯಿಂದ 6,64,694.00 ಹೆ. ಪ್ರದೇಶ ಕೈಬಿಡಲಾಗಿದೆ.
ಸೂಚನೆ:
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿದ್ದ ಸೊಪ್ಪಿನಬೆಟ್ಟ, ಗೋಮಾಳ, ಕುಮ್ಕಿ, ಕಾನು ಮುಂತಾದ ರೈತರ ವಿಶೇಷ ಹಕ್ಕುಳ್ಳ ಪ್ರದೇಶಗಳನ್ನು ಡೀಮ್ಡ್ ಅರಣ್ಯ ವ್ಯಾಪ್ತಿಗೆ ಸೇರಿಸಲಾಗಿತ್ತು.
ರಾಜ್ಯ ಸರ್ಕಾರವು 2022ರಲ್ಲಿ ಸುಪ್ರೀಂಕೋರ್ಟ್‌ಗೆ ಡೀಮ್ಡ್ ಅರಣ್ಯದ ಪರಿಷ್ಕೃತ ಮಾಹಿತಿಯನ್ನು ಸಲ್ಲಿಸಿತ್ತು. ಈ ಬಗ್ಗೆ ಫೆಬ್ರವರಿ 6, 2024ರಂದು ಕೇಂದ್ರ ಪರಿಸರ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಹೆಚ್ಚಿನ ವಿವರಣೆ ಕೇಳಿದ್ದು, ಅರಣ್ಯ ಹಕ್ಕುಗಳ ಮೇಲಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಹೆಚ್ಚುತ್ತಿರುವ ಅರಣ್ಯ ಕಾನೂನು ಮತ್ತು ಜನರ ನಡುವಿನ ಸಂಘರ್ಷ :
ರಾಜ್ಯದ ಒಟ್ಟು ಅರಣ್ಯ ಪ್ರದೇಶದ ಪೈಕಿ ಶೇ. 20ರಷ್ಟು ಪಾಲು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರೆ, ಅತಿ ಹೆಚ್ಚು ಡೀಮ್ಡ್ ಅರಣ್ಯ ಪ್ರದೇಶವು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಅರಣ್ಯ ಹಕ್ಕು ಕಾಯ್ದೆ-2006ರ ಅಡಿಯಲ್ಲಿ ಪಾರಂಪರಿಕ ಅರಣ್ಯ ವಾಸಿಗಳು ಮತ್ತು ಬುಡಕಟ್ಟು ಜನಾಂಗದವರು ಭೂಮಿಯ ಹಕ್ಕು ಕೋರಿ ಸಲ್ಲಿಸಿದ್ದ ಬಹುಪಾಲು ಅರ್ಜಿಗಳು ವಜಾಗೊಂಡಿವೆ. ಇದರಿಂದಾಗಿ ಒಂದೆಡೆ ಕಠಿಣ ಅರಣ್ಯ ಕಾನೂನುಗಳು, ಮತ್ತೊಂದೆಡೆ ದಶಕಗಳಿಂದ ಸಾಗುವಳಿ ನಂಬಿ ಬದುಕುತ್ತಿರುವ ಜನರ ಹಕ್ಕುಗಳ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ.

