ರಿಪ್ಪನ್‌ಪೇಟೆ ; ಪ್ರಕೃತಿಯ ಸಂರಕ್ಷಣೆಯ ಮಹತ್ವವನ್ನು ಸರ್ವತ್ರ ಸಾದರಪಡಿಸುವ ನಾಗರಪಂಚಮಿ ರಾಷ್ಟ್ರೀಯ ಪರ್ವವಾಗಿದೆ. ಪ್ರಾಚೀನ ಧರ್ಮ ಪರಂಪರೆಯಲ್ಲಿ ನಾಗಾರಾಧನೆಯ ಐತಿಹ್ಯ ಪ್ರಧಾನವಾಗಿದೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ತಿಳಿಸಿದರು.
ಉಪಸರ್ಗಗಳನ್ನು ನಿವಾರಿಸಿ ವೈಯುಕ್ತಿಕವಾಗಿ ರಕ್ಷಣೆ ನೀಡುವ ಧರಣೇಂದ್ರ ಯಕ್ಷ ಹಾಗೂ ಯಕ್ಷಿ ಪದ್ಮಾವತಿ ದೇವಿ ಕೃಪೆ ಎಲ್ಲರಿಗೂ ಲಭಿಸಲಿ. ವಿಪುಲ ಜಲನಿಧಿಯಿಂದ ಬೆಳೆ ವಿಪುಲವಾಗಿ ಬೆಳೆದು ಆಹಾರದ್ರವ್ಯಗಳು ಯಥೇಚ್ಛವಾಗಿ ದೊರೆಯಲೆಂದು ಶ್ರೀಗಳವರು ಆಶಿಸುತ್ತಾ, ನಾಗಾರಾಧನೆಯಿಂದ ಅನರ್ಘ್ಯ ಫಲಪ್ರಾಪ್ತಿಯಾಗಲಿ ಎಂದು ಭಕ್ತರನ್ನು ಹರಸಿದರು.
ಪ್ರಾತಃಕಾಲ ಶ್ರೀ ನೇಮಿನಾಥ ಸ್ವಾಮಿ, ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ ಸನ್ನಿಧಿಯಲ್ಲಿ ಆಗಮೋಕ್ತ ವಿಧಿಯಂತೆ ಪೂಜಾ ಕೈಕಂರ್ಯಗಳು ನೆರವೇರಿದವು. ಬಳಿಕ ಅಭೀಷ್ಠವರ ಪ್ರದಾಯಿನಿ ಶ್ರೀ ಪದ್ಮಾವತಿ ದೇವಿ, ಶ್ರೀ ಸರಸ್ವತಿ ದೇವಿ ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಕ್ಷೇತ್ರಪಾಲ ಸಾನಿಧ್ಯದಲ್ಲಿ ಭಕ್ತರು ಪೂಜೆ ಸಲ್ಲಿಸಿದರು.
ಶ್ರೀ ನಾಗದೇವರ ಪೂಜೆಯನ್ನು ಎಳನೀರು, ಹಾಲು ಅರಿಶಿನ, ಫಲ-ಪುಷ್ಪ ಸಮರ್ಪಣೆಯ ಪೂರ್ವ ಪರಂಪರೆಯಂತೆ ನೆರವೇರಿಸಲಾಯಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.