ಹೊಸನಗರ : ‘ಜೈನ ಧರ್ಮದ ಶ್ರೀ ಸುಪಾರ್ಶ್ವ ತೀರ್ಥಂಕರ, ಶ್ರೀ ಪಾರ್ಶ್ವನಾಥ ತೀರ್ಥಂಕರರು ನಾಗದೇವತೆಯ ಕೃಪೆಗೊಳಗಾದವರು ರಕ್ಷಕರಾಗಿ ವಿಘ್ನಗಳನ್ನು ನಿವಾರಿಸಿದ ಐತಿಹ್ಯವಿದೆ’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಶ್ರೀ ಜೈನ ಮಠದ ಪೀಠಾಧೀಶ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ತಮ್ಮ ಮಂಗಲ ಪ್ರವಚನದಲ್ಲಿ ತಿಳಿಸಿದರು.
ಪ್ರಸಕ್ತ ನಾಗಾರಾಧನೆಯನ್ನು ಪ್ರಕೃತಿಯನ್ನು ಪ್ರೀತಿಯಿಂದ ಆರೈಕೆ ಮಾಡುವ ಮರ್ಮವನ್ನು ಶ್ರೀಗಳವರು ತಿಳಿಸುತ್ತಾ, “ನಾಗರಪಂಚಮಿ ಸರ್ವರಿಗೂ ಪ್ರಕೃತಿ ಆರಾಧನೆ ಪರ್ವ” ಎಂದು ಹೇಳಿದರು.
ಆಧಿನಾಯಕ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ, ಅಭೀಷ್ಠವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಆಗಮೋಕ್ತ ವಿಧಾನದಂತೆ ಪೂಜೆ ಸಲ್ಲಿಸಲಾಯಿತು. ಶ್ರೀನಾಗದೇವರ ಸನ್ನಿಧಿಯಲ್ಲಿ ಶ್ರೀಗಳವರ ಉಪಸ್ಥಿತಿಯಲ್ಲಿ ಆರಾಧನೆ, ಪೂಜೆಯನ್ನು ಎಳನೀರು, ಹಾಲು, ಅರಿಶಿನ, ಫಲ-ಪುಷ್ಪ ಸಮರ್ಪಣೆಯನ್ನು ಪೂರ್ವ ಪರಂಪರೆಯಂತೆ ನೆರವೇರಿಸಲಾಯಿತು. ಊರ ಪರವೂರ ಭಕ್ತರ ಪಾಲ್ಗೊಳ್ಳುವಿಕೆಯಿಂದ ಸಾಂಗವಾಗಿ ನೆರವೇರಿತು.
ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಮಂಡಳದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಶ್ರೀಕ್ಷೇತ್ರದ ಎಲ್ಲಾ ಜಿನಾಲಯಗಳಲ್ಲಿ ನಿತ್ಯಪೂಜೆ ನಡೆಯಿತು.

