ಶಿವಮೊಗ್ಗ: ಹೊಸನಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೊಡಚಾದ್ರಿ ಬೆಟ್ಟದಲ್ಲಿ ಆಯತಪ್ಪಿ ಕೆಳಗೆ ಬಿದ್ದ ಪ್ರವಾಸಿಗನನ್ನು ಸ್ಥಳೀಯ ಜೀಪ್ ಚಾಲಕರು ರಕ್ಷಿಸಿದ ಘಟನೆ ನಡೆದಿದೆ.
ಕುಮುಟಾ ಮೂಲದ ಪ್ರದೀಪ್ ಎಂಬುವವರು ಗಾಯಗೊಂಡ ಪ್ರವಾಸಿಗ. ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದ ಅವರು, ಶಂಕರಾಚಾರ್ಯ ಪೀಠದ ಸಮೀಪ ತೆರಳುವಾಗ ತಲೆಸುತ್ತಿನಿಂದ ಆಯತಪ್ಪಿ ಸುಮಾರು 60 ಅಡಿ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಗಮನಿಸಿದ ಪ್ರವಾಸಿಗರು ತಕ್ಷಣವೇ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಕೊಲ್ಲೂರು, ನಿಟ್ಟೂರು ಹಾಗೂ ಸಂಪೆಕಟ್ಟೆ ಭಾಗದ ಪ್ರವಾಸಿ ಜೀಪ್ ಚಾಲಕರು ಸಮಯಪ್ರಜ್ಞೆ ಮೆರೆದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಕಷ್ಟಕರವಾದ ಬೆಟ್ಟ ಪ್ರದೇಶದಲ್ಲಿಯೇ ಜೀಪ್ ಚಾಲಕರು ತಕ್ಷಣ ಕಾರ್ಯಪ್ರವೃತ್ತರಾಗಿ ಪ್ರದೀಪ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆ ತಂದು ರಕ್ಷಿಸಿದ್ದಾರೆ. ಬಳಿಕ ಗಾಯಗೊಂಡ ಪ್ರವಾಸಿಗರನ್ನು ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಪ್ರದೀಪ್ ಅವರ ತಲೆ, ಕೈ ಮತ್ತು ಕಾಲು ಭಾಗದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಜೀಪ್ ಚಾಲಕರ ತ್ವರಿತ ಸ್ಪಂದನೆಯಿಂದ ದೊಡ್ಡ ಅನಾಹುತ ತಪ್ಪಿದೆ.
ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

