ಹೊಸನಗರ ; ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಸಾಧನವೇ ದಿನಪತ್ರಿಕೆ. ಗ್ರಾಮೀಣ ಪ್ರದೇಶದ ಹತ್ತು ಹಲವು ಸಮಸ್ಯೆಗಳನ್ನು ಎತ್ತಿ ಹಿಡಿಯುವ ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸದಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ ಹಿರಿದಾಗಿದೆ ಎಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಆಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಹೊಸನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದವರು ನಿಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಕೈಗನ್ನಡಿಯಾಗಬೇಕು. ಪರ, ವಿರೋಧ ಎರಡನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಊರಿನ ಮೂಲಭೂತ ಸೌಲಭ್ಯಗಳ ಬಗ್ಗೆ ಗಮನಸೆಳೆಯುವ ಕೆಲಸ ಮಾಡುವುದರೊಂದಿಗೆ ರಾಜಕಾರಣಿಗಳನ್ನು ಎಚ್ಚರಿಸುವ ಕಾರ್ಯದಲ್ಲಿ ಗ್ರಾಮೀಣ ಪ್ರದೇಶದ ಪತ್ರಕರ್ತರ ಕಾರ್ಯವನ್ನು ಪ್ರಶಂಸಿದರು.
ಸಾಧಕ ಪತ್ರಕರ್ತರನ್ನು ಶಾಸಕ ಆರಗ ಜ್ಞಾನೇಂದ್ರ ಸನ್ಮಾನಿಸಿ ಮಾತನಾಡಿ, ಪತ್ರಿಕೋದ್ಯಮವು ಇಂದು ವ್ಯಾಪಾರೋದ್ಯಮವಾಗಿ ಬೆಳೆಯುತ್ತಿದ್ದು ಈ ಹಿಂದಿನ ಲಂಕೇಶ್, ಹಾಯ್ ಬೆಂಗಳೂರು ಇನ್ನಿತರ ದಿನಪತ್ರಿಕೆಗಳಲ್ಲಿ ಬರುವ ಹಲವು ವರದಿಗಳಿಂದ ಓದುಗರು ಕುತೂಹಲದಿಂದ ಪತ್ರಿಕೆ ಬರುವುದನ್ನು ಕಾದು ಕುಳಿತು ನೋಡುವ ಕಾಲವೊಂದಿತ್ತು. ಆದರೆ ಇಂದಿನ ಪತ್ರಿಕೆಗಳು ಹಾಗೂ ಪತ್ರಕರ್ತರು ಹಣ ಗಳಿಕೆಯತ್ತ ಮುಖ ಮಾಡಿಕೊಂಡು ತಮ್ಮ ಮೌಲ್ಯವನ್ನು ಹಾಳು ಮಾಡುವಂತಾಗಿವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಪತ್ರಿಕೆಗಳು ತಮ್ಮ ಮೌಲ್ಯಧಾರಿತ ವರದಿಯಿಂದ ಓದುಗರನ್ನು ಆಕರ್ಷಿಸುವಂತಾಗಬೇಕು ಮತ್ತು ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವಂತಹ ವರದಿಯನ್ನು ಪ್ರಕಟಿಸುವ ಧ್ವನಿಯಾಗಬೇಕು ಎಂದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿದನೂರು ರವಿ ಆಧ್ಯಕ್ಷತೆ ವಹಿಸಿದ್ದರು. ಶಿಮುಲ್ ಅಧ್ಯಕ್ಷ ಹೆಚ್.ಎನ್.ವಿದ್ಯಾಧರ್ ಪತ್ರಿಕಾ ವಿತರಕರಿಗೆ ಪುರಸ್ಕಾರ ನೀಡಿ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಜಿಲ್ಲಾ ಕಾಂಗ್ರೆಸ್ ಯುವ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಉದ್ಯಮಿ ಹಾಲಗದ್ದೆ ಉಮೇಶ್, ಮಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮತಿ, ಗ್ರಾಮ ಪಂಚಾಯಿತಿ ಸದಸ್ಯ ನಾಗೋಡಿ ವಿಶ್ವನಾಥ, ಪದವಿ ಪೂರ್ವ ಕಾಲೇಜ್ ಸಿಡಿಸಿ ಉಪಾಧ್ಯಕ್ಷ ಜೆ.ವಿ.ಸುಬ್ರಹ್ಮಣ್ಯ, ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಗೋಪಾಲ ಕಟ್ಟಿನಮನೆ, ಸಹಶಿಕ್ಷಕ ಖಮರುಲ್ಲಾ ಇನ್ನಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸಾಧಕ ಹಿರಿಯ ಪತ್ರಕರ್ತರ ನಾಗೇಶ್ ಎಸ್.ನಾಯಕ್ ಹಾಗೂ ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಾಗೂ ಪತ್ರಿಕಾ ವಿತರಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಯಕ್ಷಪಲ್ಲವಿ ಟ್ರಸ್ಟ್ (ರಿ.) ಮಾಳಕೋಡ ಇವರಿಂದ ಯಕ್ಷಮಾಣಿಕ್ಯ ಚಿಂತನಾ ಹೆಗಡೆ, ಮಾಳಕೋಡ ಇವರ ಗಾನಸಾರಥ್ಯದಲ್ಲಿ ‘ಯಕ್ಷ-ಗಾನ-ನೃತ್ಯ-ವೈಭವ’ ನಡೆಯಿತು.
ಪತ್ರಕರ್ತ ನಾಗರಕೊಡಿಗೆ ರವಿ ಸ್ವಾಗತಿಸಿದರು. ಅಶ್ವಿನಿಪಂಡಿತ್ ನಿರೂಪಿಸಿದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.