ಹೊಸನಗರ ; ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ವಿರುದ್ಧ ಕೈಗೊಂಡಿದ್ದ ಅವಿಶ್ವಾಸ ಗೊತ್ತುವಳಿ ವಿಫಲವಾಗಿದೆ. ಪಂಚಾಯಿತಿ ಕಛೇರಿಯಲ್ಲಿ ಬುಧವಾರ ನಡೆದ ಅವಿಶ್ವಾಸ ಗೊತ್ತುವಳಿ ನಿರ್ಣಯ ಸಭೆಯಲ್ಲಿ ಕೋರಂ ಕೊರತೆ ಹಿನ್ನೆಲೆಯಲ್ಲಿ ಸಭೆ ನಡೆಯದೇ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದೆ.
ಒಟ್ಟು 10 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ವಿರುದ್ಧ 7 ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆದರೆ ನಿಗದಿತ ಸಮಯಕ್ಕೆ ಸಭೆ ಆರಂಭವಾದಾಗ, ಕೇವಲ 6 ಸದಸ್ಯರು ಮಾತ್ರ ಸಭೆಗೆ ಆಗಮಿಸಿದ್ದರು. ಅಧ್ಯಕ್ಷ ಶ್ರೀನಿವಾಸ ಸೇರಿದಂತೆ 4 ಮಂದಿ ಸದಸ್ಯರು ಗೈರಾಗಿದ್ದರು.
ಅವಿಶ್ವಾಸ ಗೊತ್ತುವಳಿಗೆ ಮೂರನೇ ಎರಡರಷ್ಟು ಸದಸ್ಯರ ಬಲ ಇಲ್ಲದಿದ್ದಲ್ಲಿ ಕೋರಂ ಕೊರತೆ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಭೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ಸಭಾ ನಡಾವಳಿ ದಾಖಲಿಸಿ ಪ್ರಭಾರ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಎಚ್.ಜೆ.ರಶ್ಮಿ ಹಾಲೇಶ್ ಸಭೆಯನ್ನು ಅಂತ್ಯಗೊಳಿಸಿದರು. ಕಳೆದ ಒಂದೂವರೆ ವರ್ಷದ ಹಿಂದೆ ಶ್ರೀನಿವಾಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಅಧ್ಯಕ್ಷ ಶ್ರೀನಿವಾಸ್ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ದುರುದ್ದೇಶಪೂರ್ವಕವಾಗಿ ಅವಿಶ್ವಾಸ ನಿರ್ಣಯ ಮಂಡಿಸುವುದು ಸರಿಯಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗುತ್ತದೆ. ಆದರೆ ಇಂದು ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂದ ಜಯ. ನಾವು ಅಧ್ಯಕ್ಷರಾಗಿ ಆಯ್ಕೆಯಾಗುವಾಗ ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವ ಉದ್ದೇಶದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತೇವೆ ಮಧ್ಯದಲ್ಲಿಯೇ ಸದಸ್ಯರ ಬೆಂಬಲ ಸಿಗುವುದಿಲ್ಲ ಇದರಿಂದ ಆಡಳಿತ ನಡೆಸುವುದು ಕಷ್ಟಕರವಾಗಿರುತ್ತದೆ. ಇದರ ಜೊತೆಗೆ ಅವಿಶ್ವಾಸ ಇರುತ್ತೇವೆ ಎಂದು ಹೆದರಿಸುವುದು ಬೇರೆಯಾಗಿರುತ್ತದೆ ಅಧ್ಯಕ್ಷನಾಗಿ ಕೆಲಸ ಮಾಡಬೇಕಾದರೆ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು ಪಕ್ಷಭೇದ ಮರೆತು ಒಂದಾಗಿ ಕೆಲಸ ಮಾಡಬೇಕಾಗುತ್ತದೆ ಹಾಗೂ ಗ್ರಾಮದ ಅಭಿವೃದ್ಧಿಯನ್ನು ಮಾಡಬಹುದು ಅದನ್ನು ಬಿಟ್ಟು ಗ್ರಾಮ ಪಂಚಾಯತಿಯಲ್ಲಿ ಒಡೆದ ಮನೆಯಾದರೆ ಯಾರಿಂದಲೂ ಕೆಲಸ ಮಾಡಲು ಸಾಧ್ಯವಿಲ್ಲ. ಈ ಅವಿಶ್ವಾಸ ಗೊತ್ತುವತಿ ಬಿದ್ದು ಹೋಗಿರುವುದರಿಂದ ಉಳಿದ 8 ತಿಂಗಳು ಎಲ್ಲ ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಲು ಸಹಕರಿಸಬೇಕೆಂದು ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಕಾಂಗ್ರೆಸ್ ಮುಖಂಡ ಕಲಗೋಡು ರತ್ನಾಕರ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚಂದ್ರಮೌಳಿ ಗೌಡ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರ ಸಹಕಾರದೊಂದಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನಷ್ಟು ಜನಪರ ಕಾಳಜಿಯಿಂದ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.