ರಿಪ್ಪನ್‌ಪೇಟೆ ; ಶಾಸಕ ಹರತಾಳು ಹಾಲಪ್ಪನವರ ಅಧಿಕಾರಾವಧಿಯಲ್ಲಿ ಹೊಸನಗರ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಅಮ್ಮನಘಟ್ಟ ದೇವಸ್ಥಾನದ ಅಭಿವೃದ್ದಿಗೆ ಸರ್ಕಾರದಿಂದ ನೀರಾವರಿ ನಿಗಮದಿಂದ 1 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಸಿ ನಿರ್ಮಿತಿ ಕೇಂದ್ರದವರಿಗೆ ಕಾಮಗಾರಿ ನಿರ್ವಹಿಸಲು ಟೆಂಡರ್ ಮಾಡಲಾಗಿದ್ದು ಇದನ್ನು ಸಹಿಸದೆ ಇಂದಿನ ಶಾಸಕ ಗೋಪಾಲಕೃಷ್ಣ ಬೇಳೂರು ನಿರ್ಮಿತಿ ಕೇಂದ್ರಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದರೊಂದಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ತಡೆಹಿಡಿಯುವ ಮೂಲಕ ಸರ್ಕಾರಕ್ಕೆ ವಾಪಾಸ್ಸು ಕಳುಹಿಸಿದ್ದಾರೆ. ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡಲು ಹೊರಟಿದ್ದಾರೆ. ಈ ಬಗ್ಗೆ ನಮ್ಮ ಶಾಸಕ ಹರತಾಳು ಹಾಲಪ್ಪನವರ ಅಧಿಕಾರಾವಧಿಯಲ್ಲಿ ಮಾಡಲಾದ ಅಭಿವೃದ್ದಿ ಮತ್ತು ಹಾಲಿ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮ ಈಗಿನ ಎರಡೂವರೆ ವರ್ಷದಲ್ಲಿ ಅಭಿವೃದ್ದಿಗೆ ಎಷ್ಟು ಹಣ ಬಿಡುಗಡೆ ಮಾಡಿಸಿದ್ದಾರೆಂದು ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತಿಮನೆ ಸವಾಲು ಹಾಕಿದರು.
ರಿಪ್ಪನ್‌ಪೇಟೆಯ ಗ್ರಾಮ ಪಂಚಾಯಿತ್ ಸಭಾಭವನದಲ್ಲಿ ಇಂದು ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಭಾಗದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯಲ್ಲಿ ಸಾಕಷ್ಟು ನಂಬಿಕೆ ಇಟ್ಟುಕೊಂಡ ಭಕ್ತರ ಭಾವನೆಗೆ ಮಸಿ ಬಳಿಯುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಮಾಡಹೊರಟಿದ್ದಾರೆಂದು ಆರೋಪಿಸಿದರು.
ನಂತರ ಜಿಲ್ಲಾ ಬಿಜೆಪಿ ಮುಖಂಡ ಆರ್.ಟಿ.ಗೋಪಾಲ ಮಾತನಾಡಿ, ಹಿಂದೆ ಇಪ್ಪತ್ತು ವರ್ಷಗಳ ಕಾಲ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿದ ಕಲಗೋಡು ರತ್ನಾಕರ್‌ರವರು ತಮ್ಮ ಅವಧಿ ಮುಗಿದ ನಂತರವು ಹೊಸ ವ್ಯವಸ್ಥಾಪನಾ ಸಮಿತಿಗೆ ಪೂರ್ಣ ಪ್ರಮಾಣದ ಅಧಿಕಾರದ ಹಸ್ತಾಂತರ ಮಾಡಿಲ್ಲ. ಅಲ್ಲದೆ ದೇವಸ್ಥಾನದ ಅಭಿವೃದ್ದಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ ವಂತಿಕೆ ಹಣವನ್ನು ಸಹ ತಮ್ಮ ಬಳಿಯಲ್ಲಿ ಮೂರು ವರ್ಷದಿಂದ ತಮ್ಮ ಸ್ವಂತ ಹಣವೆಂದು ಇಟ್ಟುಕೊಂಡಿರುವುದು ಸಮಂಜಸವೇ? ಎಂದು ಪ್ರಶ್ನಿಸಿದರು.
ಮುಂದೆ ಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತ್ ಚುನಾವಣೆಯಲ್ಲಿ ಶಾಸಕರು ತಮ್ಮನ್ನು ಕೈಬಿಡಬಹುದೆಂಬ ಆತಂಕದಲ್ಲಿ ಈ ರೀತಿಯ ಹೇಳಿಕೆ ನೀಡಿರಬಹುದೆಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ಪ್ರಧಾನ ಕಾರ್ಯದರ್ಶಿ ನಾಗಾರ್ಜುನಸ್ವಾಮಿ, ಬಿಜೆಪಿ ಮಹಿಳಾ ಉಪಾಧ್ಯಕ್ಷೆ ಎ.ಟಿ.ನಾಗರತ್ನಮ್ಮ ಪಕ್ಷದ ಬೆಂಬಲಿತ ಸ್ಥಳೀಯ ಗ್ರಾಮ ಪಂಚಾಯಿತ್ ಸದಸ್ಯರು ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.
ಅಣ್ಣಪ್ಪಶೆಟ್ಟಿ ನಿಧನ !
ರಿಪ್ಪನ್‌ಪೇಟೆ ; ಬೆಳ್ಳೂರು ಗ್ರಾಮ ಪಂಚಾಯಿತ್ ಮಾಜಿ ಸದಸ್ಯ ಹಾಗೂ ಬುಕ್ಕಿವರೆ ಗ್ರಾಮದ ನಿವಾಸಿ ಅಣ್ಣಪ್ಪಶೆಟ್ಟರು (66) ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದರು.
ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು ಅವರನ್ನು ಮಣಿಪಾಲ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.