ಹೊಸನಗರ ; ವಾಸದ ಮನೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಅವರ ಸಹಚರರು ಅಡ್ಡಿಪಡಿಸುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಹೊಸನಗರ ತಾಲೂಕಿನ ತ್ರಿಣವೆ ಗ್ರಾಮದ ನಿವಾಸಿಗಳಾದ ಸೀತಮ್ಮ ಹಾಗೂ ಗೋವಿಂದನಾಯ್ಕ ಎಂಬುವವರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್‌ರಿಗೆ ಮನವಿ ಸಲ್ಲಿಸಿದ್ದಾರೆ.
ನಾವು ಕೃಷಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದಿದ್ದೇವೆ. ಗ್ರಾಮದ ಸರ್ವೆ ನಂ.74ರಲ್ಲಿ ವಾಸದ ಮನೆ ನಿರ್ಮಾಣ ಕಾರ್ಯಕೈಗೊಂಡಿದ್ದು ಇದಕ್ಕೆಮಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ಎಂಬುವವರು ಹಾಗೂ ಅವರ ಆಪ್ತರು ಕಾಮಗಾರಿ ನಡೆಸಲು ಅಡ್ಡಿಪಡಿಸಿದ್ದಾರೆ. ಹಿಂದೆ ತಳಪಾಯ ಮಾಡುವ ಸಂದರ್ಭದಲ್ಲಿಯೂ ಅಡ್ಡಿ ಮಾಡಿದ್ದರಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮನೆ ನಿರ್ಮಾಣಕ್ಕೆ ಅಡ್ಡಿಪಡಿಸದಂತೆ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ಸಹಾ ಲಭ್ಯವಾಗಿತ್ತು. ಆದರೆ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನೂ ಉಲ್ಲಂಘಿಸಿ ನಿರ್ಮಾಣ ಮಾಡಿರುವ ತಳಪಾಯವನ್ನು ದಬ್ಬಾಳಿಕೆ ಮೂಲಕ ಹಾಳುಗೆಡವಲು ಮುಂದಾಗಿದ್ದಾರೆ.

ಸದಸ್ಯ ಚಂದ್ರಶೇಖರ ರಾಜಕೀಯ ಪ್ರಭಾವಿ ವ್ಯಕ್ತಿಯಾಗಿದ್ದು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಕೂಡಲೇ ಅವರ ಮೇಲೆ ಸೂಕ್ತ ಕ್ರಮಜರುಗಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಸ್ಥಳ ಪರಿಶೀಲನೆ ನಡೆಸಿ ಗ್ರಾಮ ಪಂಚಾಯಿತಿಯಿಂದ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.