HOSANAGARA ; ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ಆಡಳಿತ ಸೋಮವಾರ ನಡೆಸಿದ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಸ್ಥಳೀಯ ಗ್ರಾಮಸ್ಥರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಬುಧವಾರ ದೂರು ಸಲ್ಲಿಸಿದ್ದು, ಹರಾಜು ಪ್ರಕ್ರಿಯೆ ನಡೆಸುವ ವೇಳೆ ನಿಯಮ ಉಲ್ಲಂಘಿಸಲಾಗಿದ್ದು, ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸಾಲಗೇರಿ ಗ್ರಾಮದ ಸರ್ವೆ ನಂ.20ರಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕಂದಾಯ ಜಾಗದಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯಿತಿ ವತಿಯಿಂದ 20 ಅಡಿ ಉದ್ದ 20 ಅಡಿ ಅಗಲದ ಜಾಗದಲ್ಲಿ ಎರಡು ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ಜಾಗದ ಒಡೆತನದ ಬಗ್ಗೆ ಹಲವು ಸಮಯದಿಂದ ವಿವಾದವಿದ್ದು, ಖಾಸಗಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣ ಇತ್ಯರ್ಥವಾಗುವ ಮುನ್ನವೇ ಪಂಚಾಯಿತಿ ಆಡಳಿತ ವಿವಾದಿತ ಜಾಗದಲ್ಲಿ ಎರಡು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿತ್ತು. ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾರ್ಯವೂ ಸಂಪೂರ್ಣ ಮುಗಿಯುವ ಹಂತದಲ್ಲಿಯೇ ಗ್ರಾಮ ಪಂಚಾಯಿತಿ ಆಡಳಿತ ದಿಢೀರ್ ಹರಾಜು ಪ್ರಕ್ರಿಯೆ ನಡೆಸುವ ಮೂಲಕ ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಒಂದೇ ವಾರದ ಒಳಗೆ ಮಳಿಗೆ ನಿರ್ಮಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಅನುದಾನವನ್ನೂ ಮೀಸಲಿಸಿಲ್ಲ. ಕಟ್ಟಡ ನಿರ್ಮಾಣ ಕಾಮಗಾರಿಗೆ ಗುತ್ತಿಗೆ ಟೆಂಡರ್ ಪ್ರಕ್ರಿಯೆಯನ್ನೂ ನಡೆಸಿಲ್ಲ. ಕಾಮಗಾರಿ ಮುಕ್ತಾಯಗೊಳ್ಳುವ ಹಂತದಲ್ಲಿಯೇ ದಿಢೀರ್ ಬಹಿರಂಗ ಹರಾಜು ನಡೆಸಿರುವುದು ಗ್ರಾಮಸ್ಥರ ಅಸಮಧಾನಕ್ಕೆ ಕಾರಣವಾಗಿದೆ. ಬಹಿರಂಗ ಹರಾಜು ಮಾಡುವ ಮುನ್ನ ಸಭಾ ನಡಾವಳಿ ಮಾಡಲಾಗಿಲ್ಲ. ವಾರ್ಡ್ ಸದಸ್ಯರೂ ಸೇರಿದಂತೆ ಹೆಚ್ಚಿನ ಸದಸ್ಯರಿಗೆ ಹರಾಜು ಪ್ರಕ್ರಿಯೆ ವಿಷಯವೇ ಗಮನಕ್ಕೆ ಬಂದಿಲ್ಲ. ಪ್ರಕಟಣೆ ಹೊರಡಿಸದೇ ಏಕಾಏಕಿ ಹರಾಜು ನಡೆಸಲಾಗಿದೆ. ಪಂಚಾಯತ್‌ರಾಜ್ ಕಾಯಿದೆಯನ್ನು ಉಲ್ಲಂಘನೆ ಮಾಡಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಗ್ರಾಮಸ್ಥರಿಗೆ ಅವಕಾಶ ನೀಡಬಾರದು ಎನ್ನುವ ಉದ್ದೇಶವಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಳಿಗೆ ಜಾಗದ ಕುರಿತು ಪ್ರಕರಣ ನಡೆಯುತ್ತಿರುವ ಕಾರಣಕ್ಕೆ ತುರ್ತಾಗಿ ಹರಾಜು ನಡೆಸಲಾಗಿದೆ. ಹರಾಜು ಕುರಿತು ಸಾಮಾನ್ಯ ಸಭೆಯಲ್ಲಿ ಘಟನೋತ್ತರ ಅನುಮೋದನೆ ಪಡೆಯಲಾಗುವುದು. ಅನುಮೋದನೆ ದೊರೆಯದಿದ್ದಲ್ಲಿ ಹರಾಜು ಪ್ರಕ್ರಿಯೆ ರದ್ದುಪಡಿಸಲಾಗುವುದು.
– ಪವನ್‌ಕುಮಾರ್, ಪಿಡಿಒ ಮೇಲಿನಬೆಸಿಗೆ ಗ್ರಾಪಂ
ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಆಗಿರುವುದಾಗಿ ಆರೋಪಿಸಿ ಸ್ಥಳೀಯ ಗ್ರಾಮಸ್ಥರು ತಾಲೂಕು ಪಂಚಾಯಿತಿ ವ್ಯವಸ್ಥಾಪಕರಿಗೆ ದೂರು ಸಲ್ಲಿಸಿದರು. ಈ ವೇಳೆ ಗ್ರಾಮಸ್ಥರಾದ ನಾಗರಾಜ ಜಟ್ಟಿನಮನೆ, ಮಣಿ, ಕಾಂತೇಶ, ದಿನೇಶ್, ಶಿವರಾಜ ಮತ್ತಿತರರು ಇದ್ದರು.