ರಿಪ್ಪನ್‌ಪೇಟೆ ; ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಂತಪುರ ಹೊಳೆ ಸಮೀಪ ಇಂದು ಮಧ್ಯಾಹ್ನ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಓರ್ವ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮೃತನನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕರಕುಚ್ಚಿ ನಿವಾಸಿ ಮರ ಕಟಾವು ಮಾಡುವ ಕೂಲಿ ಕಾರ್ಮಿಕ ರಾಜು (42) ಎಂದು ಗುರುತಿಸಲಾಗಿದೆ.

ಈ ಘಟನೆಯಲ್ಲಿ ಅದೇ ಬೈಕಿನಲ್ಲಿದ್ದ ಭದ್ರಾವತಿ ತಾಲೂಕಿನ ಬೊಮ್ಮನಕಟ್ಟೆ ಗ್ರಾಮದ ನಿವಾಸಿ ಶ್ರೀನಿವಾಸ (30) ಈತನಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಇವರು ಹುಂಚ ಸಮೀಪದ ಆನೆಗದ್ದೆ ಬಳಿ ಮರ ಕಟಾವು ಮಾಡಲು ಬಂದಿದ್ದ ಕಾರ್ಮಿಕರು. ಕೆಲಸದ ನಿಮಿತ್ತ ಚಿಕ್ಕಜೇನಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ರಿಪ್ಪನ್‌ಪೇಟೆಯಿಂದ ಕೋಡೂರಿಗೆ ಬರುತ್ತಿದ್ದ ಮತ್ತೊಂದು ಬೈಕಿನಲ್ಲಿದ್ದ ಕೋಡೂರು ಸಮೀಪದ ಸಿದ್ದಗಿರಿ ಗ್ರಾಮದ ನಿವಾಸಿಗಳಾದ ಚರಣ್ (25) ಹಾಗೂ ಪ್ರೀತಮ್ (15) ಇವರಿಗೂ ಗಂಭೀರ ಗಾಯಗಳಾಗಿವೆ.

ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಹಾಗೂ ಮಂಗಳೂರು ಆಸ್ಪತ್ರೆಗೆ
ಕರೆದೊಯ್ಯಲಾಗಿದೆ.
ಈ ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.