ಒಂದು ಯೂನಿಟ್ ರಕ್ತ ಎರಡು ಜೀವಗಳನ್ನು ಉಳಿಸಬಲ್ಲದು ; ಹನುಮಂತಪ್ಪ

Written by malnadtimes.com

Published on:

ಶಿವಮೊಗ್ಗ ; ನೀವು ದಾನ ಮಾಡುವ ಒಂದು ಯೂನಿಟ್ ರಕ್ತದಿಂದ ಎರಡು ಜೀವಗಳನ್ನು ಉಳಿಸಬಹುದು, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಪ್ರತಿವರ್ಷ ರಕ್ತದಾನ ಮಾಡುವ ಮೂಲಕ ರಕ್ತಕ್ಕಿರುವ ಬೇಡಿಕೆಯನ್ನು ಸರಿದೂಗಿಸಬಹುದು ಎಂದು ಮೆಗ್ಗಾನ್ ಆಸ್ಪತ್ರೆಯ ರಕ್ತನಿಧಿಯ ಆಪ್ತಸಮಾಲೋಚಕ ಹನುಮಂತಪ್ಪ ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಚೋರಡಿ ಸಮೀಪದ ಕೊರಗಿ ಗ್ರಾಮದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ರಕ್ತಪೌಷ್ಟೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನದ ಮಹತ್ವವನ್ನು ಎತ್ತಿ ಹಿಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಯೊಂದರಲ್ಲೇ 200ಕ್ಕೂ ಹೆಚ್ಚು ಹೀಮೋಫೀಲಿಯಾ- ಥ್ಯಾಲಸ್ಸೀಮಿಯಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು ಬೇರೆ ಬೇರೆ ಕಾರಣಗಳಿಂದಾಗಿ ಪ್ರತಿನಿತ್ಯ 50-60 ಯೂನಿಟ್ ರಕ್ತದ ಬೇಡಿಕೆ ಮೆಗ್ಗಾನ್ ಆಸ್ಪತ್ರೆಯೊಂದಕ್ಕೇ ಇದೆ. ರಕ್ತಕ್ಕಿರುವ ಅಗಾಧ ಬೇಡಿಕೆಯನ್ನು ಅರ್ಥೈಸಿಕೊಂಡು ಆರೋಗ್ಯವಂತ ಯುವಕರು ಸ್ವಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಬೇಕೆಂದು ಕರೆ ಕೊಟ್ಟರು.

ರಾ.ಸೇ.ಯೋಜನೆಯ ಸ್ವಯಂ ಸೇವಕರು ಮತ್ತು ಗ್ರಾಮಸ್ಥರಿಂದ 24 ಯೂನಿಟ್ ಗಳಷ್ಟು ರಕ್ತ ಸಂಗ್ರಹಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಹಾಗೂ ಸ್ವಯಂಸೇವಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ದಂತ ತಪಾಸಣೆ ಏರ್ಪಡಿಸಿ ಸೂಕ್ತ ಔಷಧಗಳನ್ನು ವಿತರಿಸಲಾಯಿತು.

ಭಾರತೀಯ ದಂತವೈದ್ಯಕೀಯ ಸಂಸ್ಥೆಯಿಂದ ನಡೆಸಲಾದ ದಂತಚಿಕಿತ್ಸಾ ಶಿಬಿರದಲ್ಲಿ ಸಂಘದ ಕಾರ್ಯದರ್ಶಿ ಮೇಜರ್ ಡಾ.ವಿಕ್ರಮ್ ಕೆದ್ಲಾಯ ಮತ್ತು ಡಾ. ಶಾಂತಕುಮಾರ್ ಇವರು 100ಕ್ಕೂ ಹೆಚ್ಚು ಜನರ ದಂತ ತಪಾಸಣೆ ಮಾಡಿ, ಹಲ್ಲುಗಳ ಆರೋಗ್ಯ ಸುರಕ್ಷೆಯ ಮಾಹಿತಿ ನೀಡಿದರು.

ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳಾದ ಡಾ.ಉಮೇಶ್, ಡಾ.ವೆಂಕಟೇಶ್, ಡಾ.ಮಂಜು ಹಾಗೂ ಡಾ.ಗಿರಿಧರ್ ಇವರು ರಸಮೇವು ತಯಾರಿಕೆ, ಒಣಮೇವು ಪೌಷ್ಟೀಕರಣ ಮತ್ತು ಸಮತೋಲನ ಆಹಾರ ತಯಾರಿಕೆಯ ಪ್ರಾತ್ಯಕ್ಷತೆ ನಡೆಸಿಕೊಟ್ಟರು. ಜೊತೆಗೆ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಯಿತು.

ಕೊರಗಿ ಗ್ರಾಮದ ಪ್ರಗತಿಪರ ಕೃಷಿಕ ಸಂತೋಷ್ ನಾಯಕ್ ಅವರು ಸಹಜ ಕೃಷಿಯಲ್ಲಿ ತೋಟಗಾರಿಕೆ ಹಾಗೂ ಏರುಮಡಿ ಚೌಕಾಭಾರ ಪದ್ಧತಿಯಲ್ಲಿ ತರಕಾರಿ ಬೆಳೆ ಬೆಳೆಯುವ ವಿನೂತನ ಪದ್ಧತಿಗಳನ್ನು ಪರಿಚಯಿಸಿದರು.

ಸೊರಬದ ಜೇನು ಕೃಷಿಕ ಗೌತಮ್ ಬಿಚ್ಚುಗತ್ತಿಯವರು ಸ್ವಾವಲಂಬನೆಗಾಗಿ ಜೇನುಕೃಷಿಯ ಬಗ್ಗೆ ಉಪನ್ಯಾಸ ನೀಡಿದರು. ಮೇ 17 ರಿಂದ 23ರವರೆಗೆ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Leave a Comment