ಚಿಕ್ಕಮಗಳೂರು ; ಬಹು ಜನ್ಮಗಳ ಪುಣ್ಯ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಮನುಷ್ಯ ಜೀವನದಲ್ಲಿ ಅಂದವಾಗಿ ಇರುವುದಕ್ಕಿಂತ ಆನಂದದಿಂದ ಬಾಳುವುದು ಉತ್ತಮ. ಭೌತಿಕ ಸಿರಿ ಸಂಪತ್ತುಗಳಿಗಿಂತ ಮನುಷ್ಯನಿಗೆ ಆಧ್ಯಾತ್ಮ ಸಂಪತ್ತು ಮತ್ತು ಶಾಂತಿ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಭಕ್ತಿ ಭಂಡಾರಿ ಬಸವೇಶ್ವರ ಜಯಂತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಸಕಲ ಮಾನವರಿಗೂ ಒಳಿತನ್ನು ಬಯಸುವುದೇ ನಿಜವಾದ ಧರ್ಮ. ವೀರಶೈವ ಧರ್ಮ ವೃಕ್ಷದ ಬೇರು ಶ್ರೀ ಜಗದ್ಗುರು ರೇಣುಕಾಚಾರ್ಯರಾದರೆ ಆ ವೃಕ್ಷದ ಹಣ್ಣು ಶ್ರೀ ಬಸವೇಶ್ವರರು. ಆಚಾರ್ಯರ ತತ್ವ ಸಿದ್ಧಾಂತ ಶರಣರ ಸಾಮಾಜಿಕ ಚಿಂತನ ಬದುಕಿ ಬಾಳುವ ಮನುಷ್ಯನಿಗೆ ದಾರಿದೀಪ. ಹಚ್ಚುವುದಾದರೆ ದೀಪ ಹಚ್ಚು ಬೆಂಕಿಯನ್ನಲ್ಲ. ಆರಿಸುವುದಾದರೆ ನೋವನ್ನು ಆರಿಸು ನಗುವನ್ನಲ್ಲ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ರೇಣುಕ ಗೀತೆಯಲ್ಲಿ ಬೋಧಿಸಿದ್ದಾರೆ. ಸಪ್ತ ಸೂತ್ರ ಹೇಳಿದ ಬಸವೇಶ್ವರರು ಸುಳ್ಳು ಮಾತನಾಡಬಾರದೆಂದು ಹೇಳಿದ್ದಾರೆ. ಅರಿತು ಆಚರಿಸಿ ಬಾಳುವುದೇ ನಿಜವಾದ ಧರ್ಮವೆಂದು ಪೂರ್ವಜರು ಒತ್ತಿ ಹೇಳಿದ್ದಾರೆ. ಡೋಣಿ ಮುಳುಗಲು ಒಂದು ಸಣ್ಣ ರಂಧ್ರ ಸಾಕು. ಬದುಕು ಮುಳುಗಲು ಒಂದು ಕೆಟ್ಟ ನಿರ್ಧಾರ ಸಾಕು. ಆದ್ದರಿಂದ ಮನುಷ್ಯ ಬಹಳಷ್ಟು ವಿವೇಚನೆಯಿಂದ ಮಾತನಾಡುವುದು ಶ್ರೇಯಸ್ಕರ. ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟಿನಿಂದ ಪ್ರತಿ ವರುಷ ಸಂಯುಕ್ತವಾಗಿ ಜಯಂತ್ಯುತ್ಸವ ಆಚರಿಸಿಕೊಂಡು ಬರುತ್ತಿರುವುದು ತಮಗೆ ಸಂತೋಷ ತಂದಿದೆ ಎಂದರು.

ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ತತ್ವ ಸಿದ್ಧಾಂತಗಳನ್ನು ಸಾರ್ವಕಾಲಿಕ ಸತ್ಯ ಸಂಗತಿಗಳನ್ನು ಬೋಧಿಸಿದ್ದಾರೆ. ಆ ಉನ್ನತ ದಾರಿಯಲ್ಲಿ ಶ್ರೀ ಬಸವಣ್ಣನವರು ಮುನ್ನಡೆದು ಆಧ್ಯಾತ್ಮ ರಂಗದಲ್ಲಿ ಅದ್ಭುತ ಸಾಧನೆಗೈದರೆಂದು ಹರುಷ ವ್ಯಕ್ತಪಡಿಸಿದರು.
ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಕುರಿತು ಉಪದೇಶವನ್ನಿತ್ತರು. ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಭಕ್ತಿ ಭಂಡಾರಿ ಬಸವೇಶ್ವರರು ವೀರಶೈವ ಧರ್ಮವನ್ನು ಸ್ವೀಕರಿಸಿ ಮತ್ತಷ್ಟು ಬೆಳೆಸಿ ಬಲಿಸಿದ್ದನ್ನು ಮರೆಯಲಾಗದು. ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಶ್ರೀ ಬಸವೇಶ್ವರರ ವಿಚಾರ ಧಾರೆಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾ ಕಿರಣವೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಖಜಾಂಚಿ ಯು.ಎಂ.ಬಸವರಾಜ್ ವಹಿಸಿ ಮಾತನಾಡಿದರು. ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ್, ಸದಸ್ಯರಾದ ಎಮ್.ಡಿ.ಪುಟ್ಟಸ್ವಾಮಿ, ಹೆಚ್.ಎನ್.ನಂಜೇಗೌಡ ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಪ್ರಧಾನ ಅರ್ಚಕರಾದ ವೇ. ಪುಷ್ಪಯ್ಯ ಸ್ವಾಮಿ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ವಿಶೇಷ ಗುರುರಕ್ಷೆಯಿತ್ತು ಶುಭ ಹಾರೈಸಿದರು.

ಎಸ್.ಎಂ.ದೇವಣ್ಣಗೌಡ ಸ್ವಾಗತಿಸಿದರು. ಟ್ರಸ್ಟ್ ಸದಸ್ಯರಾದ ಬಿ.ಎಂ.ಶಿವಶಂಕರ್ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಪ್ರಾತಃಕಾಲ 15 ಜನ ವಟುಗಳಿಗೆ ಶಿವದೀಕ್ಷಾ ಸಂಸ್ಕಾರ ಜರುಗಿತು. ನಂತರ ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜಾ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.