ರಿಪ್ಪನ್‌ಪೇಟೆ ; ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಗಳ ನೇಮಕಕ್ಕೆ ಸಾರ್ವಜನಿಕರ ಒತ್ತಾಯ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯಾಧಿಕಾರಿಗಳು ಇಲ್ಲದೆ ಇದ್ದು ಈಗ ಸಾರ್ವತ್ರಿಕ ವರ್ಗಾವಣೆ ನಡೆಯುತ್ತಿದ್ದು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಗಳ ಮತ್ತು ಇತರ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಕೆರೆಹಳ್ಳಿ ಹೋಬಳಿ ಮುಖ್ಯ ಕೇಂದ್ರದ ರಿಪ್ಪನ್‌ಪೇಟೆ ನಾಲ್ಕು ಜಿಲ್ಲೆಗಳ ಸಂಪರ್ಕ ಹೃದಯ ಭಾಗವಾಗಿರುವ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ದೂರದ ಊರುಗಳಿಂದ ರೋಗಿಗಳು ಬಂದು ಹೋಗುತ್ತಾರೆ. ಆದರೆ ಸರಿಯಾದ ತಜ್ಞ ವೈದ್ಯಾಧಿಕಾರಿಗಳಿಲ್ಲದೆ ಶಿವಮೊಗ್ಗ, ಮಣಿಪಾಲ, ಮಂಗಳೂರು, ತೀರ್ಥಹಳ್ಳಿ, ಸಾಗರ ಹೀಗೆ ಹೋಗುವಂತಾಗಿದೆ. ಇನ್ನೂ ಅಪಘಾತ ಇನ್ನಿತರ ತುರ್ತು ಚಿಕಿತ್ಸೆಗಾಗಿ ಬಂದರೆ ವೈದ್ಯರು ಇರುವುದಿಲ್ಲ ಹಾಗೂ ಹಿರಿಯ ಆರೋಗ್ಯ ಕಾರ್ಯಕರ್ತೆಯರು ಸರಿಯಾಗಿ ಇರುವುದಿಲ್ಲ ಸಂಜೆ ಆಯಿತೆಂದರೆ ಶಿವಮೊಗ್ಗಕ್ಕೆ ತೆರಳುತ್ತಾರೆ ರಾತ್ರಿ ಪಾಳಿ ವೈದ್ಯರು ಇಲ್ಲದೆ ಎಷ್ಟೋ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಸಾವು-ನೋವುಗಳು ಸಂಭವಿಸಿರುವ ಉದಾಹರಣೆಗಳಿವೆ. ಆದರೂ ಇಲ್ಲಿನ ಆಸ್ಪತ್ರೆಯಲ್ಲಿ ಈ ಹಿಂದೆ ಇದ್ದ ವೈದ್ಯರನ್ನು ಬೇರೆ ಕಡೆಗೆ ನಿಯೋಜಿಸಲಾದ ಕಾರಣ ಡೆಪ್ಟೇಷನ್ ಮೇಲೆ ಬಂದು ಹೋಗುವ ವೈದ್ಯರು ಬೆಳಗ್ಗೆ ಬಂದು ಸಂಜೆಯಾಗುತ್ತಿದ್ದಂತೆ ತೆರಳುತ್ತಾರೆ. ಆದರೆ ರಾತ್ರಿ ವೇಳೆ ಏನಾದರೂ ತುರ್ತು ಚಿಕಿತ್ಸೆಗೆಂದು ಬಂದರೆ ವೈದ್ಯರು ಮತ್ತು ಸಿಬ್ಬಂದಿಗಳಿಲ್ಲದೆ ಖಾಲಿಯಿರುತ್ತದೆ. ಬೇರೆ ದಾರಿ ಇಲ್ಲದೆ ದೂರದ ಶಿವಮೊಗ್ಗ ಆಥವಾ ಮಣಿಪಾಲ ಹಾಗೂ ಮಂಗಳೂರಿಗೆ ಹೋಗುವುದು ಅನಿರ್ವಾಯವಾಗಿದೆ.

ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ ಕಳೆದ 10 ವರ್ಷದಿಂದಲೂ ಇದೇ ಕಥೆಯಾಗಿದೆ. ‘ಇತ್ತ ಹಾವು ಸಾಯುವುದಿಲ್ಲ, ಅತ್ತ ಕೋಲು ಮುರಿಯುವುದಿಲ್ಲ’ ಎಂಬ ಗಾಧೆ ಮಾತಿನಂತಾಗಿರುವ ಈ ವ್ಯವಸ್ಥೆ ಬಗ್ಗೆ ಜಿಲ್ಲಾ ಮಂತ್ರಿಗಳಾಗಲಿ ಕ್ಷೇತ್ರದ ಶಾಸಕರು ಗಮನ ಹರಿಸಿ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಂಡು ಆಸ್ಪತ್ರೆಗೆ ತಜ್ಞ ವೈದ್ಯರುಗಳನ್ನು ವರ್ಗಾವಣೆ ಮಾಡಿಸುವರೆಂಬ ಆಶಾ ಭಾವನೆ ವ್ಯಕ್ತಪಡಿಸಿ ಈಗ ಸರ್ಕಾರದಲ್ಲಿ ಸಾರ್ವತ್ರಿಕ ವರ್ಗಾವಣೆ ನಡೆಯುತ್ತಿದ್ದು ನಿಯೋಜನೆಯ ಮೇಲೆ ತೆರಳಿರುವ ವೈದ್ಯರನ್ನು ವರ್ಗಾವಣೆಗೊಳಿಸಿ ಇಲ್ಲಿಗೆ ಬೇರೆಯವರನ್ನು ಖಾಯಂಯಾಗಿ ನೇಮಕ ಮಾಡುವರೆ ಕಾದು ನೋಡಬೇಕಾಗಿದೆ.

ಖಾಯಂ ವೈದ್ಯರ ನೇಮಕ ಮಾಡಿ :
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಸರಿಯಾದ ತಜ್ಞ ವೈದ್ಯರುಗಳಿಲ್ಲದೆ ಅಲೆದಾಡುವಂತಾಗಿದೆ ಕೂಡಲೇ ಸರ್ಕಾರ ಆಸ್ಪತ್ರೆಗೆ ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕು.
– ಜಿ.ಡಿ.ಮಲ್ಲಿಕಾರ್ಜುನ, ಗ್ರಾಪಂ ಸದಸ್ಯ

ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬಾಳೂರು, ಕೆಂಚನಾಲ, ಅರಸಾಳು ಬೆಳ್ಳೂರು, ಹೆದ್ದಾರಿಪುರ, ಅಮೃತ, ಹರತಾಳು, ಚಿಕ್ಕಜೇನಿ ಗ್ರಾಮ ಪಂಚಾಯ್ತಿಗಳು ಸೇರುತ್ತಿದ್ದು ನಿತ್ಯ ನೂರಾರು ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಅಲ್ಲದೆ ಶಿವಮೊಗ್ಗ, ಸಾಗರ, ಹೊಸನಗರ, ತೀರ್ಥಹಳ್ಳಿ ಸಂಪರ್ಕ ಕೇಂದ್ರ ಸ್ಥಾನವಾಗಿರುವ ರಿಪ್ಪನ್‌ಪೇಟೆಗೆ ಇಲ್ಲಿ ದಿನನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಪ್ರಯಾಣಿಕರು, ವಾಹನಗಳು ಓಡಾಡುತ್ತಾರೆ. ಆಕಸ್ಮಿಕವಾಗಿ ಏನಾದರೂ ಅವಘಡಗಳು ಸಂಭವಿಸಿದರೆ ಇಲ್ಲಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆಯಲು ಬಂದರೆ ಚಿಕಿತ್ಸೆ ದೊರೆಯುವುದು ಕಷ್ಟ. ಆ ಕಾರಣ ಖಾಯಂ ವೈದ್ಯರನ್ನು ನೇಮಿಸಿ.
– ಆರ್.ಎನ್.ಮಂಜುನಾಥ, ಜನಪರ ಹೋರಾಟಗಾರ

Leave a Comment