ಹೊಸ ದಾಖಲೆ ಸೃಷ್ಟಿಸಿದ ಮಲೆನಾಡು ಹುಡುಗ ; ಪೋಲೋ ವಾಲ್ಟ್ ಕ್ರೀಡೆಯಲ್ಲಿ 3.15 ಮೀ. ಜಿಗಿತದ ಸಾಧನೆ !

Written by Mahesha Hindlemane

Published on:

ಹೊಸನಗರ ; ಮಲೆನಾಡು ಪ್ರದೇಶದಲ್ಲಿ ಹುಟ್ಟಿಬೆಳೆದ ಹುಡುಗನೊಬ್ಬ ಹೊಸ ಬಗೆಯ ಕ್ರೀಡೆಯಲ್ಲಿ ವಿಶಿಷ್ಟ ಸಾಧನೆ ಮಾಡಿ ಗಮನ ಸೆಳೆದಿದ್ದಾನೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಟ್ಟಣದ ಮಲೆನಾಡು ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿಯಾದ ಕುಮಾರ್ ಸಾಗರ್ ಪೋಲೋ ವಾಲ್ಟ್ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ್ದು ಇದುವರೆಗೆ ದಾಖಲಾಗಿದ್ದ ಜಿಗಿತವನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾನೆ.

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ 17 ವರ್ಷ ವಯೋಮಿತಿಯ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲಾ ತಂಡದಿಂದ ಪ್ರತಿನಿಧಿಸಿದ ಹೊಸನಗರದ ಕುಮಾರ್ ಸಾಗರ್ ಪೋಲೋ ವಾಲ್ಟ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಪ್ರದರ್ಶಿಸಿದ್ದಾನೆ.

ಪೋಲೋ ವಾಲ್ಟ್ ಜಿಗಿತದಲ್ಲಿ 3.15 ಮೀಟರ್ ಎತ್ತರ ಜಿಗಿದು ತನ್ನ ಸಾಮರ್ಥ್ಯ ತೋರಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಸಂಪಾದಿಸಿದ್ದಾನೆ.

ಕರ್ನಾಟಕ ರಾಜ್ಯದಲ್ಲಿ ದಾಖಲಾದ ಇದುವರೆಗಿನ 2.80 ಮೀಟರ್ ಎತ್ತರದ ಜಿಗಿತದ ದಾಖಲೆಯನ್ನು ಕುಮಾರ್ ಸಾಗರ್ ಮುರಿದಿದ್ದು 3.15 ಮೀಟರ್ ಎತ್ತರದ ಹೊಸ ದಾಖಲೆಯನ್ನು ನಿರ್ಮಿಸಿರುತ್ತಾನೆ.

ಈ ಸಾಧನೆಯಿಂದ ಕುಮಾರ್ ಸಾಗರ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಉತ್ತರಪ್ರದೇಶ ರಾಜ್ಯದ ಲಕ್ನೋದಲ್ಲಿ ಭಾನುವಾರದಿಂದ ಆರಂಭವಾದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾನೆ.

ಕುಮಾರ್ ಸಾಗರ್ ತಾಲ್ಲೂಕಿನ ಎಂ.ಗುಡ್ಡೆಕೊಪ್ಪ ಗ್ರಾಮದ ಮಮತಾ ಹಾಗೂ ಸದಾನಂದ್ ದಂಪತಿಗಳ ಪುತ್ರನಾಗಿದ್ದಾನೆ.

ವಿದ್ಯಾರ್ಥಿ ಕುಮಾರ್ ಸಾಗರ್ ಸಾಧನೆಯಲ್ಲಿ ಶಾಲೆಯ ದೈಹಿಕ ಶಿಕ್ಷಕ ಎಸ್.ಎಲ್. ಸುರೇಶ್ ಅವರ ಪಾತ್ರ ಸಾಕಷ್ಟಿದೆ. ಅವರ ಸಲಹೆ ಸೂಚನೆ, ಮಾರ್ಗದರ್ಶನ ಫಲವಾಗಿ ಕುಮಾರ್ ಸಾಗರ್ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ರೂಪುಗೊಂಡಿದ್ದಾನೆ.

ಹೊಸನಗರ ತಾಲ್ಲೂಕಿನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪೋಲ್ ವೋಲ್ಟ್ ಕ್ರೀಡೆಯನ್ನು ಪರಿಚಯಿಸಿ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮಲೆನಾಡು ಶಾಲೆಯ ಹೆಮ್ಮೆಯ ವಿದ್ಯಾರ್ಥಿಯಾದ ಕುಮಾರ್ ಸಾಗರ್ ಗೆ ಅಭಿನಂದನೆಗಳು ಹರಿದು ಬರುತ್ತಿವೆ.

ವಿದ್ಯಾರ್ಥಿ ಕುಮಾರ್ ಸಾಗರ್ ಹಳ್ಳಿಗಾಡಿನ ಹುಡುಗ. ಕ್ರೀಡಾ ಚಟುವಟಿಕೆಗಳಿಗೆ ಯಾವುದೇ ಪೂರಕ ವಾತಾವರಣ ಇಲ್ಲದ ಎಂ.ಗುಡ್ಡೆಕೊಪ್ಪ ಎಂಬ ಪುಟ್ಟ ಊರು ಇವನದು. ಪ್ರಾಥಮಿಕ ಶಾಲೆಯಲ್ಲಿಯೇ ಆಟ, ಓಟವನ್ನು ಮೈಗೊಡಿಸಿಕೊಂಡು ಬೆಳೆದು ಕುಮಾರ್ ಸಾಗರ್ ಮಲೆನಾಡು ಪ್ರೌಢಶಾಲೆಗೆ ಸೇರುವಾಗ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡ. ಶಾಲೆಯ ದೈಹಿಕ ಶಿಕ್ಷಕ ಎಸ್.ಎಲ್. ಸುರೇಶ್ ಇವನಲ್ಲಿದ್ದ ಪ್ರತಿಭೆಯನ್ನು ಬಲುಬೇಗ ಗುರುತಿಸಿ ಇವನ ಕ್ರೀಡಾಸ್ಫೂರ್ತಿಗೆ ನೀರೆರೆದರು. ತಾಲ್ಲೂಕು, ಜಿಲ್ಲಾಮಟ್ಟದ ಆಟಗಳಿಗೆ ಕರೆದುಕೊಂಡು ಹೋಗಿ ಹುರಿದುಂಬಿಸಿದರು. ಮಲೆನಾಡು ಪ್ರದೇಶದಲ್ಲಿ ಅಷ್ಟೆನೂ ಪರಿಚಯವಿಲ್ಲದ ಪೋಲೋ ವಾಲ್ಟ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಪ್ರದರ್ಶಿಸುವಲ್ಲಿ ಆಧಾರವಾಗಿ ನಿಂತರು. ಅದರ ಫಲವಾಗಿ ವಿದ್ಯಾರ್ಥಿ ಕುಮಾರ್ ಸಾಗರ್ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾನೆ.

ಖುಷಿ ಕೊಟ್ಟಿದೆ ;
ಪೋಲೋ ವಾಲ್ಟ್ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ಆಸೆ ನನಗಿತ್ತು. ನನ್ನ ಆಸೆಗೆ ಸುರೇಶ ಸರ್ ಶಕ್ತಿಮೀರಿ ಸಹಕರಿಸಿದ್ದಾರೆ. ಅವರು ನನ್ನಲ್ಲಿ ಬಹಳ ವಿಶ್ವಾಸ ಇಟ್ಟಿದ್ದರು. ಹೊಸ ದಾಖಲೆ ಸೃಷ್ಟಿ ಮಾಡಿದ್ದು ಖುಷಿಯಾಗಿದೆ.
– ಕುಮಾರ್ ಸಾಗರ್

ಸಾಹಸಿಗ ವಿದ್ಯಾರ್ಥಿ :
ವಿದ್ಯಾರ್ಥಿ ಕುಮಾರ್ ಸಾಗರ್ ಸಾಹಸಿಗ. ಇಲ್ಲಿ ಪೋಲೋ ವಾಲ್ಟ್ ಕ್ರೀಡೆ ಅಭ್ಯಾಸ ಮಾಡುವ ಯಾವುದೇ ಸಾಧನೆ, ಸಲಕರಣೆ ಇಲ್ಲವಾಗಿದೆ. ಶಾಲೆಯಲ್ಲಿ ಲಭ್ಯವಿರುವ ಸಲಕರಣೆಯಿಂದ ಹೆಚ್ಚಿನ ಅಭ್ಯಾಸ ಮಾಡಿಸಲಾಗಿತ್ತು. ತಾಲ್ಲೂಕು ಪಂಚಾಯಿತಿ ಇಒ ನರೇಂದ್ರ ಕುಮಾರ್ ಅವರು ಕ್ರೀಡೆ ಅಭ್ಯಾಸಕ್ಕಾಗಿ 1 ಲಕ್ಷ ಅನುದಾನ ನೀಡಿದ್ದರು. ಇದು ಅಭ್ಯಾಸಕ್ಕೆ ಅನುಕೂಲವಾಗಿದೆ. ಕುಮಾರ್ ಸಾಗರ್ ಕೂಡ ಅಷ್ಟೆ ಶ್ರಮವಹಿಸಿ ಸಾಮರ್ಥ್ಯ ಪ್ರದರ್ಶಿಸಿದ್ದಾನೆ. ವಿದ್ಯಾರ್ಥಿ ಕುಮಾರ್ ಸಾಗರ್ ಗೆ ಉತ್ತಮ ಭವಿಷ್ಯ ಇದೆ.
– ಎಸ್.ಎಲ್. ಸುರೇಶ್, ದೈಹಿಕ ಶಿಕ್ಷಕ, ಮಲೆನಾಡು ಪ್ರೌಢಶಾಲೆ ಹೊಸನಗರ.

Leave a Comment