ಶಿವಮೊಗ್ಗ: ಹೊಸನಗರ ತಾಲೂಕಿನ ಒಗ್ಗಟ್ಟು ಕಾಪಾಡಲು ಹಾಗೂ ಸ್ಥಳೀಯ ಮುಳುಗಡೆ ಸಂತ್ರಸ್ತರ ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪುನಃ ಸ್ಥಾಪಿಸಬೇಕು ಎಂದು ಸರ್ವೋದಯ ಮಂಡಳದ ತಾಲೂಕು ಅಧ್ಯಕ್ಷ ಎಸ್.ಆರ್. ವಿಶ್ವೇಶ್ವರಯ್ಯ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಪ್ರತ್ಯೇಕ ಶಾಸಕರಿಲ್ಲದ ಕಾರಣ ಹೊಸನಗರದ ಜನರ ಧ್ವನಿ ಶಾಸನಸಭೆಯಲ್ಲಿ ಪರಿಣಾಮಕಾರಿಯಾಗಿ ಕೇಳಿಸುತ್ತಿಲ್ಲ. ತಾಲೂಕಿನ ಭಾಗಗಳು ಎರಡು ಬೇರೆ ಕ್ಷೇತ್ರಗಳಿಗೆ ಹಂಚಿಹೋಗಿರುವುದರಿಂದ ಆಡಳಿತಾತ್ಮಕವಾಗಿ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಸವಾಲಾಗಿದೆ” ಎಂದರು.
1952ರ ಪ್ರಥಮ ಸಾರ್ವತ್ರಿಕ ಚುನಾವಣೆಯಿಂದಲೂ ಹೊಸನಗರವು ಸ್ವತಂತ್ರ ವಿಧಾನಸಭಾ ಕ್ಷೇತ್ರವಾಗಿ ಅಸ್ತಿತ್ವದಲ್ಲಿತ್ತು. ಆದರೆ, ಕೇಂದ್ರ ಚುನಾವಣಾ ಆಯೋಗವು 2008ರಲ್ಲಿ ನಡೆಸಿದ ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಈ ಕ್ಷೇತ್ರ ರದ್ದಾಯಿತು. ಹೀಗಾಗಿ 2004ರಲ್ಲಿ ನಡೆದಿದ್ದೇ ಈ ಕ್ಷೇತ್ರದ ಕೊನೆಯ ಚುನಾವಣೆಯಾಯಿತು. ಕ್ಷೇತ್ರ ಮರುಹಂಚಿಕೆಯ ನಂತರ ಹೊಸನಗರದ ಪ್ರದೇಶಗಳು ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಗಳಿಗೆ ಸೇರ್ಪಡೆಗೊಂಡವು. ಇದರಿಂದಾಗಿ ತಾಲೂಕಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಶಾಸಕರು ತಮ್ಮ ಕ್ಷೇತ್ರಗಳ ಕೇಂದ್ರಸ್ಥಾನಗಳಾದ ಸಾಗರ ಮತ್ತು ತೀರ್ಥಹಳ್ಳಿಗೆ ಹೆಚ್ಚು ಅನುದಾನ ಹಾಗೂ ಆದ್ಯತೆ ನೀಡುತ್ತಿದ್ದಾರೆ. ಪರಿಣಾಮವಾಗಿ, ಹೊಸನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಂದಗತಿಯಲ್ಲ ಸಾಗುತ್ತಿದ್ದು, ತಾಲೂಕಿನ ಸಮಸ್ಯೆಗಳ ಪರಿಹಾರಕ್ಕಾಗಿ ರಾಜಕೀಯ ಒತ್ತಡ ಹೇರುವುದು ಸಹ ಕಷ್ಟಕರವಾಗಿದೆ. ಆದ್ದರಿಂದ ಪ್ರತ್ಯೇಕ ಕ್ಷೇತ್ರ ಮರುಸೃಷ್ಟಿಯಾಗುವುದು ಸ್ಥಳೀಯರ ಹಕ್ಕೊತ್ತಾಯವಾಗಿದೆ ಎಂದು ತಿಳಿಸಿದರು.
ಈ ಕುರಿತು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಗಮನ ಸೆಳೆಯಲು ಸೆಪ್ಟೆಂಬರ್ 24ರಿಂದ ಬೃಹತ್ ‘ಅಂಚೆ ಕಾರ್ಡ್ ಚಳುವಳಿ’ ಹಮ್ಮಿಕೊಳ್ಳಲಾಗುತ್ತಿದ್ದು, ಸುಮಾರು 10 ಸಾವಿರ ಅಂಚೆ ಪತ್ರಗಳನ್ನು ರವಾನಿಸಲಾಗುವುದು ಎಂದು ಹೇಳಿದರು.
ಮಂಡಳದ ಸಲಹಾ ಸಮಿತಿ ಮುಖ್ಯಸ್ಥ ಎಂ.ಎನ್. ಸುಂದರ್‌ರಾಜ್ ಮಾತನಾಡಿ, “ಕಳೆದ 15 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಂಡಳಿಯು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಶಾಖೆಗಳನ್ನು ಹೊಂದಿದೆ. ವಿಸ್ತಾರವಾದ ಹೊಸನಗರ ತಾಲೂಕಿನಲ್ಲಿ ಪ್ರತ್ಯೇಕ ಕ್ಷೇತ್ರವಿಲ್ಲದಿರುವುದರಿಂದ ಶಾಸಕರ ಗಮನ ಕೊರತೆಯಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ಜನರಿಗೆ ನ್ಯಾಯ ಸಿಗುವವರೆಗೂ ಮಂಡಳಿ ಹೋರಾಟ ನಡೆಸಲಿದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಜಿಲ್ಲಾಧ್ಯಕ್ಷ ಆರ್. ಮನೋಹರ್, ಕಾರ್ಯದರ್ಶಿ ಜಿ. ವಿಜಯ್ ಕುಮಾರ್ ಹಾಗೂ ಗೌರವಾಧ್ಯಕ್ಷ ಬಸವರಾಜಪ್ಪ ಪರಪ್ಪ ಕಂದಗಲ್ ಉಪಸ್ಥಿತರಿದ್ದರು.

