CHIKKAMAGALURU | ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ತಗ್ಗಿದ್ದರು ಅಲ್ಲಲ್ಲಿ ಆಗಾಗ್ಗೆ ಬಿರುಗಾಳಿಯೊಂದಿಗೆ ಮಳೆಯಾರ್ಭಟ ಜೋರಾಗಿದ್ದು ಅನಾಹುತನ್ನು ತಂದೊಡ್ಡುತ್ತಿದೆ.
ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನ ತಲೆಯ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದು ಗಂಭೀರ ಗಾಯಗೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಘಟನೆ ಮೂಡಿಗೆರೆ ತಾಲೂಕು ತುಂಬರಗಡಿ ಗ್ರಾಮದಲ್ಲಿ ನಡೆದಿದೆ.
ಬಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳು, ಮರಗಳು ಧರಾಶಾಹಿಯಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಹ ಕಣ್ಣಾಮುಚ್ಚಾಲೆ ನಡೆಸುತ್ತಿದೆ.
ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಮಳೆಯ ನಡುವೆ ನಿರಂತರ ಹರಸಾಹಸಪಟ್ಟು ವಿದ್ಯುತ್ ಸಂಪರ್ಕ ಸರಿಪಡಿಸುತ್ತಿದ್ದರು ಭಾರೀ ಗಾಳಿಯ ಹೊಡೆತಕ್ಕೆ ಮರ, ವಿದ್ಯುತ್ ಕಂಬಗಳು ಬೀಳುತ್ತಿರುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ.
ತುಂಬರಗಡಿ ಗ್ರಾಮದ ದಿವೀತ್ ಎಂಬ ಯುವಕ ಬಸ್ ಇಳಿದು ಮನೆಗೆ ತೆರಳುತ್ತಿದ್ದ ಈ ವೇಳೆ ವಿದ್ಯುತ್ ಕಂಬ ಮೈಮೇಲೆ ಬಿದ್ದಿದೆ. ಯುವಕನ ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.