ಶಿವಮೊಗ್ಗ ಸುದ್ದಿ

ಕುಪ್ಪಗಡ್ಡೆಗೆ ವಿದ್ಯುತ್ ಬಲ: ₹29.69 ಕೋಟಿ ಮೊತ್ತದ ನೂತನ ಸಬ್‌ಸ್ಟೇಷನ್ ಕಾಮಗಾರಿಗೆ ಮಧು ಬಂಗಾರಪ್ಪ ಚಾಲನೆ

ಕುಪ್ಪಗಡ್ಡೆ ಹಾಗೂ ಸುತ್ತಮುತ್ತಲ ಹಳ್ಳಿಗಳ ಬಹುದಿನಗಳ ಕನಸಾಗಿದ್ದ 110/11 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ (ಸಬ್‌ಸ್ಟೇಷನ್) ಸ್ಥಾಪನೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.

Madhu Bangarappa Kuppagadde 5
  • ಒಂದೇ ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ವಾಗ್ದಾನ
  • ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ, ಸರ್ಕಾರಿ ಶಾಲೆಗೆ ಭೇಟಿ

ಸೊರಬ: ತಾಲ್ಲೂಕಿನ ಕುಪ್ಪಗಡ್ಡೆ ಹಾಗೂ ಸುತ್ತಮುತ್ತಲ ಹಳ್ಳಿಗಳ ಬಹುದಿನಗಳ ಕನಸಾಗಿದ್ದ 110/11 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ (ಸಬ್‌ಸ್ಟೇಷನ್) ಸ್ಥಾಪನೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಶಾಲಾ ಶಿಕ್ಷಣ, ಸಾಕ್ಷರತೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಶುಕ್ರವಾರ ₹29.69 ಕೋಟಿ ಅಂದಾಜು ವೆಚ್ಚದ ಈ ಮಹತ್ವಾಕಾಂಕ್ಷಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

WhatsApp Group Join Now
Telegram Group Join Now
Instagram Group Join Now

ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲೇ ಮಧು ಬಂಗಾರಪ್ಪ ಅವರು ಯೋಜನೆಗೆ ಮಂಜೂರಾತಿ ಕೊಡಿಸಿದ್ದರು. ಆದರೆ, ಅರಣ್ಯ ಇಲಾಖೆಯ ತಾಂತ್ರಿಕ ಅನುಮತಿ ಕೊರತೆ ಸೇರಿದಂತೆ ನಾನಾ ಅಡೆತಡೆಗಳಿಂದಾಗಿ ಕಾಮಗಾರಿ ಆರಂಭವಾಗಿರಲಿಲ್ಲ. ಇದೀಗ ಎಲ್ಲ ತೊಡಕುಗಳನ್ನು ಬಗೆಹರಿಸಿ ಕಾಮಗಾರಿಗೆ ಪುನಶ್ಚೇತನ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, “ಮುಂದಿನ ಒಂದು ವರ್ಷದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಈ ಉಪಕೇಂದ್ರವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು” ಎಂದು ತಿಳಿಸಿದರು. ಇದರಿಂದ ಕುಪ್ಪಗಡ್ಡೆ, ಬೊಮ್ಮನಹಳ್ಳಿ, ತೊಗರ್ಸಿ, ಉದ್ರಿ, ಗುಡಗಿನಕೊಪ್ಪ, ನಿಟ್ಟಕ್ಕಿ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಮತ್ತು ಸಾರ್ವಜನಿಕರಿಗೆ ಗುಣಮಟ್ಟದ, ನಿರಂತರ ವಿದ್ಯುತ್ ಸರಬರಾಜು ದೊರೆಯಲಿದೆ.

₹1 ಕೋಟಿ ವೆಚ್ಚದ ರಿಂಗ್ ರಸ್ತೆ ಅಭಿವೃದ್ಧಿ

ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ (2025-26) ಭಾಗವಾಗಿ ಕುಪ್ಪಗಡ್ಡೆ ಗ್ರಾಮದ ರಿಂಗ್ ರಸ್ತೆಯ ಮುಂದುವರಿದ ಭಾಗದ ನಿರ್ಮಾಣ ಕಾಮಗಾರಿಗೂ ಸಚಿವರು ಇದೇ ವೇಳೆ ಶಂಕುಸ್ಥಾಪನೆ ನೆರವೇರಿಸಿದರು. ಈ ರಸ್ತೆ ಅಭಿವೃದ್ಧಿಗೆ ಸುಮಾರು ₹1 ಕೋಟಿ ವಿನಿಯೋಗಿಸಲಾಗುತ್ತಿದೆ.

ಸರ್ಕಾರಿ ಶಾಲೆಗೆ ದಿಢೀರ್ ಭೇಟಿ, ಮಕ್ಕಳೊಂದಿಗೆ ಊಟ

ಗ್ರಾಮ ಪ್ರವಾಸದ ನಡುವೆ ಕುಪ್ಪಗಡ್ಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ ಸಚಿವರು, ಶಾಲೆಯ ಸೌಕರ್ಯಗಳು ಹಾಗೂ ಶೈಕ್ಷಣಿಕ ಪ್ರಗತಿಯನ್ನು ಖುದ್ದು ವೀಕ್ಷಿಸಿದರು.

ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಬೆರೆತು ಸಂವಾದ ನಡೆಸಿದ ಅವರು, ಶಾಲೆಯ ಕರಾಟೆ ಪಟುಗಳ ಪ್ರದರ್ಶನವನ್ನು ವೀಕ್ಷಿಸಿ ಬೆನ್ನುತಟ್ಟಿದರು. ಮಕ್ಕಳ ಸಮವಸ್ತ್ರ ಮತ್ತು ಪಾದರಕ್ಷೆಗಳನ್ನು ಪರಿಶೀಲಿಸಿದ ನಂತರ, ವಿದ್ಯಾರ್ಥಿಗಳ ಸಾಲಿನಲ್ಲಿಯೇ ಕುಳಿತು ಬಿಸಿಯೂಟ ಸವಿದರು. ಇದೇ ವೇಳೆ, ಶಾಲೆಯನ್ನು ‘ಕರ್ನಾಟಕ ಪಬ್ಲಿಕ್ ಸ್ಕೂಲ್’ (ಕೆಪಿಎಸ್) ಆಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ದೇವಸ್ಥಾನ ಭೇಟಿ ಹಾಗೂ ಮುಖಂಡರ ಯೋಗಕ್ಷೇಮ ವಿಚಾರಣೆ

ಗ್ರಾಮದ ಐತಿಹಾಸಿಕ ಶ್ರೀ ಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಅಲ್ಲಿ ನಡೆಯುತ್ತಿರುವ ನೂತನ ರಥ ನಿರ್ಮಾಣದ ಪ್ರಗತಿ ಪರಿಶೀಲಿಸಿದರು.

ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದಾನಪ್ಪ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಇತ್ತೀಚೆಗೆ ವಿದ್ಯುತ್ ಕಂಬ ದುರಸ್ತಿ ವೇಳೆ ಆಕಸ್ಮಿಕವಾಗಿ ಗಾಯಗೊಂಡಿದ್ದ ಮುಖಂಡ ಸತೀಶ್ (ಗ್ರಾ.ಪಂ. ಮಾಜಿ ಅಧ್ಯಕ್ಷೆ ಕಮಲಾಕ್ಷಿ ಅವರ ಪತಿ) ಅವರ ಮನೆಗೂ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಅಗ್ನಿ ಅವಘಡದಲ್ಲಿ ನಷ್ಟ ಅನುಭವಿಸಿದ ರೈತನಿಗೆ ಸಾಂತ್ವನ

ಸೂರಣಗಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಿಂದ ನೂರಾರು ಕುರಿ-ಕೋಳಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ರಾಮಪ್ಪ ಅವರ ಮನೆಗೆ ತೆರಳಿದ ಸಚಿವರು ಸಾಂತ್ವನ ಹೇಳಿದರು. ಸಂಭವಿಸಿದ ಆರ್ಥಿಕ ನಷ್ಟದ ಮಾಹಿತಿ ಪಡೆದುಕೊಂಡ ಅವರು, ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಸಂತ್ರಸ್ತ ರೈತನಿಗೆ ಶೀಘ್ರವೇ ಸರ್ಕಾರದ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ ಪಾಟೀಲ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ತಬಲಿ ಬಂಗಾರಪ್ಪ, ಮುಖಂಡರಾದ ಗಣಪತಿ ಹುಲ್ತಿಕೊಪ್ಪ, ಎಂ.ಬಿ. ಶೇಖರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]