ಹೊಸನಗರ

ನಿಯಮಕ್ಕಿಲ್ಲ ಬೆಲೆ, ಪ್ರಯಾಣಿಕರಿಗಿಲ್ಲ ನೆಲೆ: ಹೊಸನಗರ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವುದೇನು?

ಹೊಸನಗರದಲ್ಲಿ ಬಸ್‌ಗಳ ಸಂಚಾರ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಇರಬೇಕಾದ ಜಾಗದಲ್ಲಿ ನಿರಂತರವಾಗಿ ವೇದಿಕೆ ಕಾರ್ಯಕ್ರಮಗಳು ನಡೆಯುತ್ತಿರುವುದು ನಿತ್ಯ ಸಂಚರಿಸುವ ಜನಸಾಮಾನ್ಯರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

Hosanagara Bus Stand

ಹೊಸನಗರ: ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣವು ತನ್ನ ಮೂಲ ಉದ್ದೇಶವನ್ನು ಕಳೆದುಕೊಂಡು ರಾಜಕೀಯ ಮತ್ತು ಸಮುದಾಯ ಸಭೆಗಳ ತಾಣವಾಗಿ ಮಾರ್ಪಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಬಸ್‌ಗಳ ಸಂಚಾರ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಇರಬೇಕಾದ ಜಾಗದಲ್ಲಿ ನಿರಂತರವಾಗಿ ವೇದಿಕೆ ಕಾರ್ಯಕ್ರಮಗಳು ನಡೆಯುತ್ತಿರುವುದು ನಿತ್ಯ ಸಂಚರಿಸುವ ಜನಸಾಮಾನ್ಯರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ಈ ಪ್ರಮುಖ ಸಾರಿಗೆ ಕೇಂದ್ರವು ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನೌಕರರು ಹಾಗೂ ವೃದ್ಧರಿಗೆ ಜೀವನಾಡಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಲ್ಲಿ ಬೃಹತ್ ಶಾಮಿಯಾನ, ಧ್ವನಿವರ್ಧಕಗಳನ್ನು ಅಳವಡಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ವಾಹನ ನಿಲುಗಡೆ ಹಾಗೂ ಪ್ರಯಾಣಿಕರ ಮುಕ್ತ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ಬಸ್ ನಿಲ್ದಾಣದ ಆವರಣದಲ್ಲಿ ಯಾವುದೇ ಖಾಸಗಿ ಅಥವಾ ರಾಜಕೀಯ ಸಮಾರಂಭಗಳಿಗೆ ಅನುಮತಿ ನೀಡಬಾರದು ಎಂದು ಈ ಹಿಂದೆ ಪಟ್ಟಣ ಪಂಚಾಯಿತಿ ತೀರ್ಮಾನ ಕೈಗೊಂಡಿದ್ದರೂ, ನಿಯಮಗಳನ್ನು ಗಾಳಿಗೆ ತೂರಿ ಅನುಮತಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಆವರಣಕ್ಕೆ ಹಾನಿ ಮತ್ತು ಅನಧಿಕೃತ ಪಾರ್ಕಿಂಗ್:

ಹಿಂದೆ ನಡೆದ ರಾಜಕೀಯ ಪಕ್ಷದ ಕಾರ್ಯಕ್ರಮ ಹಾಗೂ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟದ ಸಭೆಗಳ ಸಂದರ್ಭದಲ್ಲಿ ಪೆಂಡಾಲ್ ನಿರ್ಮಾಣಕ್ಕಾಗಿ ಬಸ್ ನಿಲ್ದಾಣದ ಕಾಂಕ್ರೀಟ್ ನೆಲಹಾಸು ಮತ್ತು ರೇಲಿಂಗ್ಸ್‌ಗಳನ್ನು ಹಾಳುಗೆಡವಲಾಗಿತ್ತು. ಅಷ್ಟೇ ಅಲ್ಲದೆ, ಗಂಟೆಗಟ್ಟಲೆ ಬಸ್‌ಗಳು ಒಳಗೆ ಪ್ರವೇಶಿಸದಂತೆ ತಡೆಯೊಡ್ಡಲಾಗಿತ್ತು. ಇದರ ಜೊತೆಗೆ ಸಮೀಪದ ಕಲ್ಯಾಣ ಮಂಟಪಗಳಲ್ಲಿ ನಡೆಯುವ ಸಮಾರಂಭಗಳಿಗೆ ಬರುವ ವಾಹನಗಳ ನಿಲುಗಡೆಗೂ ಹಾಗೂ ಬಾಡಿಗೆ ವಾಹನಗಳಿಗೆ ನಿಲ್ದಾಣದ ಜಾಗವನ್ನೇ ಬಳಸಿಕೊಳ್ಳಲಾಗುತ್ತಿರುವುದು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.

ಸ್ಪಷ್ಟ ನಿಯಮಾವಳಿ ರೂಪಿಸಲು ಆಗ್ರಹ:

ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಪ್ರತಿಭಟನೆ ಹಾಗೂ ಸಭೆಗಳನ್ನು ನಡೆಸಲು ಅವಕಾಶವಿದ್ದರೂ, ಅದಕ್ಕಾಗಿ ಪ್ರಯಾಣಿಕರ ಮೂಲಸೌಕರ್ಯವನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾದ ಕಠಿಣ ನಿಯಮಾವಳಿಗಳನ್ನು ಜಾರಿಗೆ ತರಬೇಕಿದ್ದು, ಬಸ್ ನಿಲ್ದಾಣವನ್ನು ಕೇವಲ ಸಾರಿಗೆ ಉದ್ದೇಶಕ್ಕೆ ಮಾತ್ರ ಸೀಮಿತಗೊಳಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ತಕ್ಷಣವೇ ಎಚ್ಚೆತ್ತುಕೊಳ್ಳಬೇಕಿದೆ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಪರದಾಟ ಮತ್ತಷ್ಟು ಬಿಗಡಾಯಿಸುವ ಆತಂಕವಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]