ಹೊಂಬುಜ : ಜೈನ ಮಠದ ವತಿಯಿಂದ ನೀಡುವ 2026ನೇ ಸಾಲಿನ ‘ಸಿದ್ಧಾಂತಕೀರ್ತಿ’ ಪ್ರಶಸ್ತಿಯನ್ನು ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ವಿಶ್ರಾಂತ ಕುಲಸಚಿವರಾದ ಪ್ರೊ. ಶಾಂತಿನಾಥ ದಿಬ್ಬದರಿಗೆ ನೀಡಲಾಗುವುದೆಂದು ಪರಮಪೂಜ್ಯ ಶ್ರೀಗಳು ಘೋಷಿಸಿದ್ದಾರೆ.
ಈ ಪ್ರಶಸ್ತಿಯನ್ನು ವಾರ್ಷಿಕ ಮಹಾ ರಥಯಾತ್ರಾ ಮಹೋತ್ಸವದ ಮುನ್ನಾ ದಿನವಾದ ಮಾ.11ರ ಬುಧವಾರದಂದು ನಡೆಯುವ ಧಾರ್ಮಿಕ ಸಭೆಯಲ್ಲಿ ನೀಡಲಾಗುವುದು.
ಮೂಲತಃ ಬೆಳಗಾವಿ ಜಿಲ್ಲೆಯವರಾದ ಇವರು ಧಾರವಾಡದಲ್ಲಿ ವಾಸವಿದ್ದು, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ. ಪಿಎಚ್‌ಡಿ. ಪದವೀಧರರಾಗಿದ್ದಾರೆ. ಕರ್ನಾಟಕ ವಿ.ವಿ, ಗುಲಬರ್ಗಾ ವಿ.ವಿ. ಯಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿ ನಂತರ ಕುಲಸಚಿವರಾಗಿ ನಿವೃತ್ತರಾದರು.
ಇವರು ಜೈನ ಸಾಹಿತ್ಯ, ಹಳಗನ್ನಡ ಸಾಹಿತ್ಯ, ಶಾಸ್ತ್ರ ಸಾಹಿತ್ಯ ಹಾಗೂ ಸಮಗ್ರ ಸಾಹಿತ್ಯ ಗ್ರಂಥ ಸಂಪಾದನೆ, ಉಪನ್ಯಾಸ, ಇನ್ನಿತರ ಕಾರ್ಯಗಳಲ್ಲಿ ವಿಶೇಷ ಅನುಭವ ಹೊಂದಿದ್ದು ಇವರು ಪಿಎಚ್‌ಡಿ, ಎಂ.ಫಿಲ್ ಸಂಶೋಧನ ಮಾರ್ಗದರ್ಶಕರಾಗಿದ್ದಾರೆ.
ಪಂಪಭಾರತ ಸಾಂಸ್ಕೃತಿಕ ಅಧ್ಯಯನ, ವಾಗ್ದೇವಿಯ ಭಂಡಾರದ ಮುದ್ರೆ, ಜೀವಪರ-ಜನಪರ, ಆಗಮಿಕ, ಜೈನ ಸಂಸ್ಕೃತಿ ಸಮೀಕ್ಷೆ, ಜೈನ ಪುರಾಣಗಳ ಸಂದೇಶ, ಅಭಿನವ ಪಂಪಭಾರತ ಇವರ ಪ್ರಮುಖ ಸಾಹಿತ್ಯ ಕೃತಿಗಳು ಹಾಗೂ ಧವಲವಾಣಿ, ಶಾಂತಿಸಂದೇಶ, ಜ್ಷಾನಗಂಗಾ, ಸರ್ವಜ್ಞ, ಸಮಸ್ತ ಭಾರತ, ಸುವರ್ಣಪದ್ಮ ಇನ್ನಿತರ ಕೃತಿಗಳನ್ನು ಸಂಪಾದಿಸಿದ್ದಾರೆ.
ಇವರ ಸಾಹಿತ್ಯ ರುಚಿಗೆ ಹಲವಾರು ಪ್ರಶಸ್ತಿ ಪುರಸ್ಕಾರ, ಗೌರವಗಳು ಲಭಿಸಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ, ಶ್ರವಣಬೆಳಗೊಳದ ಗೊಮ್ಮಟೇಶ ಪುರಸ್ಕಾರ, ದ.ಭಾ. ಜೈನ ಮಹಾಸಭಾ ಸಾಂಗ್ಲಿ ಇವರ ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ರನ್ನ ಹಳೆಗನ್ನಡ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ ಪ್ರಶಸ್ತಿಗಳು ಸಹ ಇವರಿಗೆ ಲಭಿಸಿವೆ.
ಹೊಂಬುಜ ಜೈನ ಮಠದಿಂದ ನೀಡುವ ಸಿದ್ದಾಂತಕೀರ್ತಿ ಪ್ರಶಸ್ತಿಯು ರೂ. 50,000 ಗಳ ನಗದು ಮತ್ತು ಅಂಗವಸ್ತ್ರ ಸಹಿತ ನೀಡಿ ಗೌರವಿಸಲಾಗುವುದು.
ಇದುವರೆಗೂ ಅನೇಕ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ಸುಮಾರು 5 ದಶಕಗಳಿಂದ ಶ್ರೀಮಠದಿಂದ ನೀಡಲಾಗುತ್ತಿದೆ ಎಂದು ಹೊಂಬುಜ ಜೈನ ಮಠದ ಪರಮಪೂಜ್ಯ ಸ್ವಾಮೀಜಿಯವರು ತಿಳಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





