ಹೊಸನಗರ ; ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ, ಜಾತಿ ಮತ್ತು ಹೆಣ್ಣು-ಗಂಡೆಂಬ ಹಸ್ತಕ್ಷೇಪ ನಿಲ್ಲುವವರೆಗೆ ಸಹಕಾರಿ ಕ್ಷೇತ್ರವು ಪ್ರಗತಿ ಕಾಣಲು ಸಾಧ್ಯವಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದರು.
ಇಲ್ಲಿನ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ, ನಿರ್ದೇಶಕರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
90ರ ದಶಕದಲ್ಲಿ ಬೆಳೆ ಸಾಲಗಳಿಗೆ ಶೇ.20 ರಷ್ಟು ಬಡ್ಡಿದರವಿತ್ತು. ಬಳಿಕ ಹಂತ ಹಂತವಾಗಿ ಕಡಿಮೆಯಾಗಿ ಪ್ರಸ್ತುತ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ದೊರೆಯುತ್ತಿದೆ. ಕಡಿಮೆ ಬಡ್ಡಿ ದರದಲ್ಲಿ ಅಲ್ಪಾವಧಿ, ಮಧ್ಯಮಾವಧಿ ಸಾಲ ದೊರೆಯುತ್ತಿದೆ. ಆದಾಗ್ಯೂ ರೈತರು ಖಾಸಗಿ ಸಂಸ್ಥೆಗಳಲ್ಲಿ ಅಧಿಕ ಬಡ್ಡಿ ದರದ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು.
ನಬಾರ್ಡ್ ನೀಡುತ್ತಿದ್ದ ಪುನರ್ಧನದ ಮೊತ್ತವನ್ನು ಕಡಿತಗೊಳಿಸಿದೆ. ಆದರೆ ಸಾಕಷ್ಟು ಹಿಂದೆಯೇ ಎಲ್ಲಾ ಸಹಕಾರಿ ಸಂಸ್ಥೆಗಳೂ ಸ್ವಂತ ಬಂಡವಾಳ ಹೊಂದಬೇಕು ಎಂದು ಸೂಚನೆ ನೀಡಲಾಗಿತ್ತು. 2006ರಲ್ಲಿ ವೈದ್ಯನಾಥನ್ ವರದಿ ಶಿಫಾರಸ್ಸಿನಂತೆ ನಷ್ಟದಲ್ಲಿರುವ ಸಹಕಾರಿ ಸಂಘಗಳಿಗೆ ಆರ್ಥಿಕ ಚೇತರಿಕೆ ನೀಡಿತ್ತು. ಆದರೆ ಮುಂಬರುವ ದಿನಗಳಲ್ಲಿ ಮತ್ತೆ ನಷ್ಟದತ್ತ ಸಾಗುವುದಿಲ್ಲ ಎಂಬ ಭರವಸೆ ಪಡೆಯಲಾಗಿತ್ತು. ಆದರೆ ಇಂದು ಹಲವು ಸಂಸ್ಥೆಗಳು ಮತ್ತೆ ನಷ್ಟಕ್ಕೆ ಸಿಲುಕಿರುವುದಕ್ಕೆ ಕಾರಣ ಸ್ವಂತ ಬಂಡವಾಳದ ಕೊರತೆ ಎಂದರು.
ಸಮಯ ಪರಿಪಾಲನೆ ಯಶಸ್ಸಿನ ಗುಟ್ಟು. ಸಂಸ್ಥೆಯ ಉದ್ಯೋಗಿಗಳು, ಆಡಳಿತ ಮಂಡಳಿ ಸದಸ್ಯರು ಸಕಾಲದಲ್ಲಿ ಸಭೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಎಷ್ಟೋ ಸದಸ್ಯರಿಗೆ ಸಂಸ್ಥೆಯ ಬೈಲಾ ಹಾಗೂ ನಿಯಮಗಳ ಅರಿವೇ ಇರುವುದಿಲ್ಲ. ಇದು ಸಂಸ್ಥೆಯ ಏಳಿಗೆಗೆ ಮಾರಕ. ಸಹಕಾರಿ ಸಂಸ್ಥೆಗಳು ತಮ್ಮ ಆಡಳಿತದಲ್ಲಿ ರಾಜಕೀಯ, ಜಾತಿ ಹಾಗೂ ಲಿಂಗ ತಾರತಮ್ಯವನ್ನು ದೂರವಿಡುವುದು ಉತ್ತಮ ಎಂದು ಸಲಹೆ ನೀಡಿದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸಂಸ್ಥೆಯಲ್ಲಿ ಆಡಳಿತ ನಡೆಸುವುದು ಸುಲಭವಲ್ಲ. ಹಲವು ಸವಾಲುಗಳು ಇವೆ. ಶಿಸ್ತುಬದ್ಧ ವ್ಯವಹಾರ ನಡೆಸಿದಲ್ಲಿ, ಸಂಸ್ಥೆ ಎಂದೂ ನಷ್ಟದತ್ತ ಸಾಗಲಾರದು ನಮ್ಮ ಸಹಕಾರಿ ಸಂಸ್ಥೆಗಳ ಸದಸ್ಯರು ಸಮಯ ಪಾಲನೆ ಮಾಡುತ್ತಿಲ್ಲ ಗ್ರಾಮ ಪಂಚಾಯತಿ ಸದಸ್ಯರು ಜಿಲ್ಲಾ ಪಂಚಾಯತಿ ಸದಸ್ಯರು ಯಾವ ಸಮಯದಲ್ಲಿಯಾದರೂ ಬರಬಹುದು ಹೋಗ ಬಹುದು ಎಂಬ ರೀತಿ ನಮ್ಮ ಸದಸ್ಯರು ಬಂದು ಹೋಗುವ ಪದ್ದತಿಯಲ್ಲಿ ನಡೆದುಕೊಳ್ಳುತ್ತಿದ್ದು ರಾಜಕೀಯ ಪಕ್ಷಗಳು ಆಡಳಿತ ನಡೆಸುವುದು ನಮ್ಮ ತೆರಿಗೆ ಹಣದಿಂದ ಆಡಳಿತ ನಡೆಸುತ್ತಾರೆ ಅದರೆ ನಮ್ಮ ಸಹಕಾರಿ ಸಂಸ್ಥೆಗಳು ನಮ್ಮ ಸ್ವಂತ ಬಂಡವಾಳದಿಂದ ಆಡಳಿತ ನಡೆಸಬೇಕಾಗಿರುವುದರಿಂದ ನಮ್ಮ ದೇಹ ಮೈಯೆಲ್ಲಾ ಕಣ್ಣಾಗಿ ಆಡಳಿತ ನಡೆಸಬೇಕಾಗಿದೆ. ಪ್ರತಿಯೊಬ್ಬ ಸದಸ್ಯರು ತಿಂಗಳಿಗೆ ಒಂದು ಆಡಳಿತ ಮಂಡಳಿಯ ಸಭೆ ನಡೆಸಬೇಕು ಎಲ್ಲ ಸದಸ್ಯರ ತೀರ್ಮಾನದಂತೆ ನಡೆದುಕೊಂಡರೇ ಸಹಕಾರಿ ಸಂಘಗಳನ್ನು ಉಳಿಸಲು ಬೆಳೆಸಲು ಸಾಧ್ಯ ಎಂದರು.
ಶಿಮುಲ್ ಅಧ್ಯಕ್ಷ ಎಚ್.ಎನ್.ವಿದ್ಯಾಧರ, ರಾಮೇಶ್ವರ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಡಿ.ಆರ್.ವಿನಯಕುಮಾರ್, ಪ್ರಮುಖರಾದ ಹರತಾಳು ನಾಗರಾಜ್, ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕರಾದ ಎಂ.ಎಂ.ಪರಮೇಶ್, ಕಲ್ಯಾಣಪ್ಪಗೌಡ, ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕರಾದ ಹಾಲಪ್ಪ, ಸಹಕಾರಿ ಸಂಘಗಳ ಪ್ರಬಂಧಕ ಸತೀಶ್‌ಕುಮಾರ್, ಪರಮೇಶ್ವರಪ್ಪ, ಡಿ.ಸಿ.ಸಿ ಬ್ಯಾಂಕ್ ಕ್ಷೇತ್ರಾಧಿಕಾರಿಗಳು ಮತ್ತಿತರರು ಇದ್ದರು.
ಲೆಕ್ಕ ಪರಿಶೋಧಕ ಜಿ.ಕೆ.ರಾಮಪ್ಪ ನೂತನ ಸದಸ್ಯರಿಗೆ ತರಬೇತಿ ನೀಡಿದರು.