ಹೊಸನಗರ : ಸುಮಾರು 15 ದಿನಗಳ ಕಾಲ ದೆಹಲಿಯ ಜಂತರ್-ಮಂತರ್ ಹಾಗೂ ಹಲವು ಕಡೆ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ಹೋರಾಟ ನಡೆಸುವುದರ ಜೊತೆಗೆ ದೇಶ ವಿರೋಧಿ ಹೇಳಿಕೆಗಳು, ಹಿಂದು ವಿರೋಧಿ ಹೇಳಿಕೆಗಳು ಹಾಗೂ ಶ್ರೀರಾಮನ ವಿರುದ್ಧ ಹೇಳಿಕೆಗಳು ಹಾಗೂ ಉಗ್ರರ ಫೋಟೋ ಪ್ರದರ್ಶನ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ನಮ್ಮ ಹೆಮ್ಮೆಯ ಸೈನಿಕರ ವಿರುದ್ಧ ಅವಹೇಳನಕಾರಿ ಭಾಷಣಗಳನ್ನು ಮಾಡಿದ್ದು ಅಂತಹ ದೇಶ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ಬಂಧಿಸಬೇಕೆಂದು ಹಿಂದು ಕಾರ್ಯಕರ್ತ ಸುಧೀಂದ್ರ ಪಂಡಿತ್ ಹೇಳಿದರು.
ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ನೆಪವನ್ನಾಗಿ ಮಾಡಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹಾಗೂ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ಸೋಮವಾರ ಹೊಸನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಹೆಸರಿನಲ್ಲಿ ನಡೆಯುತ್ತಿರುವ ಕೆಲವು ಪ್ರತಿಭಟನೆಗಳ ವೇಳೆ ದೇಶವಿರೋಧಿ ಹೇಳಿಕೆಗಳು ಕೇಳಿಬರುತ್ತಿವೆ ಎಂದು ಆರೋಪಿಸಿದರು. ಹಿಂದೂಗಳ ಆರಾಧ್ಯ ದೈವ ಶ್ರೀರಾಮ ಹಾಗೂ ದೇಶವನ್ನು ಕಾಯುತ್ತಿರುವ ಸೈನಿಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರ ಉರುಳಿಸುವ ಪಿತೂರಿ ಇದೆ ಎಂಬ ಆರೋಪ ಪ್ರತಿಭಟನೆಯಲ್ಲಿ ಕಳೆದ 10 ರಿಂದ 15 ದಿನಗಳಿಂದ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗಳ ಹಿಂದೆ ದೊಡ್ಡ ಮಟ್ಟದ ಪಿತೂರಿ ಅಡಗಿದೆ. ಸರ್ಕಾರ ಈಗಾಗಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಕೆಲ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ತನಿಖಾ ಸಮಿತಿಯನ್ನೂ ರಚಿಸಿದೆ. ಆದರೂ ಪ್ರತಿಭಟನೆಗಳು ಮುಂದುವರಿಯುತ್ತಿರುವುದರಿಂದ ಇದರ ಹಿಂದೆ ಸಂಘಟಿತ ಶಕ್ತಿಗಳ ಕೈವಾಡ ಇರುವ ಅನುಮಾನ ವ್ಯಕ್ತವಾಗುತ್ತಿದೆ. ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ನೇಪಾಳದಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಿದ ಮಾದರಿಯಲ್ಲೇ ಭಾರತದಲ್ಲೂ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಲಾಗಿದೆ ಎಂದು ಅವರು ಆರೋಪಿಸಿದರು.
‘ಡೀಪ್ ಸ್ಟೇಟ್’ ಹಾಗೂ ವಿದೇಶಿ ಶಕ್ತಿಗಳ ಕುರಿತು ಆರೋಪ :
ಪ್ರತಿಭಟನೆಯಲ್ಲಿ ಮಾತನಾಡಿದ ಗಣಪತಿ ಬೆಳಗೋಡು, ವಿದ್ಯಾರ್ಥಿಗಳ ಪ್ರತಿಭಟನೆಯ ಹಿಂದೆ ‘ಡೀಪ್ ಸ್ಟೇಟ್’, ಜರ‍್ಜ್ ಸೊರೊಸ್ ಸೇರಿದಂತೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದರು. ಮಾಜಿ ಎಎಪಿ ನಾಯಕರೊಬ್ಬರು ವಿದೇಶದಲ್ಲಿರುವ ಕೆಲವು ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಅದೇ ವೇಳೆ ‘ಕಾಕ್ರೋಚ್ ಜನತಾ ಪಾರ್ಟಿ ಎಂಬ ಸಂಘಟನೆ ಅಥವಾ ಪಕ್ಷದ ಮೂಲಕ ಮೊಬೈಲ್ ಆಧಾರಿತ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಪ್ರಸ್ತಾಪಿಸಿದರು.
ನೀಟ್ ವಿವಾದವನ್ನು ಅಸ್ತ್ರವನ್ನಾಗಿ ಬಳಸಲಾಗಿದೆ ಎಂಬ ಆರೋಪ :
ಬೆಂಗಳೂರು, ರಾಜಸ್ಥಾನ ಹಾಗೂ ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿರೀಕ್ಷಿತ ಬೆಂಬಲ ಸಿಗದ ಹಿನ್ನೆಲೆಯಲ್ಲಿ, ವ್ಯವಸ್ಥೆಯೊಳಗಿನ ಕೆಲ ಭ್ರಷ್ಟ ಅಧಿಕಾರಿಗಳನ್ನು ಬಳಸಿಕೊಂಡು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ. ಈ ಆರೋಪಗಳಿಗೆ ಯಾವುದೇ ಅಧಿಕೃತ ದಾಖಲೆ ಅಥವಾ ಪುರಾವೆಯನ್ನು ಅವರು ಸಾರ್ವಜನಿಕವಾಗಿ ಮಂಡಿಸಲಿಲ್ಲ ಎಂದು ಎನ್.ಆರ್ ದೇವಾನಂದ್ ಹೇಳಿದರು.
ಧಾರ್ಮಿಕ ಮುಖಂಡರ ಭಾಗವಹಿಸುವಿಕೆ ಪ್ರಶ್ನೆ
ವಿದ್ಯಾರ್ಥಿಗಳ ಪ್ರತಿಭಟನೆಗಳಲ್ಲಿ ಕೆಲ ಧಾರ್ಮಿಕ ಮುಖಂಡರು ಭಾಗವಹಿಸುತ್ತಿರುವುದನ್ನು ಪ್ರಶ್ನಿಸಿದ ಪ್ರತಿಭಟನಾಕಾರರು, ಚರ್ಚ್ ಫಾದರ್‌ಗಳು, ಮೌಲಾನಾಗಳು ಹಾಗೂ ‘ಟುಕ್ಡೇ ಗ್ಯಾಂಗ್’ ಎಂದು ಆರೋಪಿಸಿದ ಕೆಲವು ಗುಂಪುಗಳು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿರುವುದರ ಉದ್ದೇಶವನ್ನು ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸೋನಮ್ ವಾಂಗ್ಚುಕ್ ಕುರಿತು ಆರೋಪ :
ದೆಹಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರ ಚಟುವಟಿಕೆಗಳ ಹಿಂದೆಯೂ ಇದೇ ರೀತಿಯ ಶಕ್ತಿಗಳಿವೆ ಎಂದು ಕೆಲ ಮುಖಂಡರು ಆರೋಪಿಸಿದರು. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳನ್ನು ಅವರು ಬಹಿರಂಗಪಡಿಸಲಿಲ್ಲ.
ಕಠಿಣ ಕ್ರಮಕ್ಕೆ ಒತ್ತಾಯ :
ವಿದ್ಯಾರ್ಥಿಗಳ ಭವಿಷ್ಯವನ್ನು ನೆಪವನ್ನಾಗಿ ಮಾಡಿಕೊಂಡು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ದೇಶವಿರೋಧಿ ಶಕ್ತಿಗಳನ್ನು ಗುರುತಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಧನ್ಯಶ್ರೀ ರಮೇಶ್, ಅನೂಪ್ ಅರವಿಂದ್, ಎನ್ ಶ್ರೀಧರ ಉಡುಪ, ಪ್ರಶಾಂತ್ ಆಟೋ, ಎಂ.ಎನ್. ಸುಧಾಕರ್, ಕೆ.ವಿ. ವಿನಯ್, ಶ್ರೀಪತಿ ರಾವ್, ರಾಘವೇಂದ್ರ ಕಲ್ಕೊಪ್ಪ, ಮಂಜುನಾಥ್ ಸಂಜೀವ, ರಾಜು, ಉಮೇಶ್ ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಬಳಿಕ ರಾಜ್ಯಪಾಲರಿಗೆ ಸಲ್ಲಿಸುವಂತೆ ಅಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಿ, ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





