ಹೊಸನಗರ : ಮಲೆನಾಡಿನ ಜನರಿಗೆ ಮರಣ ಶಾಸನ ವಿಧಿಸುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ನೇತೃತ್ವದಲ್ಲಿ ಆಗಸ್ಟ್ 29ರಂದು ತಾಲೂಕಿನ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಹೊಸನಗರದವರೆಗೆ ಬೃಹತ್ ಪ್ರತಿಭಟನೆ ಏರ್ಪಡಿಸಿರುವುದಾಗಿ ವೇದಿಕೆಯ ಸಂಘಟಕ, ಸಹಕಾರಿ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ತಿಳಿಸಿದ್ದಾರೆ.
ಅವರು ಇಲ್ಲಿನ ಸಹಕಾರಿ ಭವನದಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಸುಮಾರು 21,000 ಚದರ ಕಿಲೋಮೀಟರ್ ಪಶ್ಚಿಮ ಘಟ್ಟಗಳ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಜುಲೈ 27 ರಂದು ಕರಡು ಅಧಿಸೂಚನೆಯನ್ನು ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯ ಪ್ರಕಟಿಸಿದೆ. ಇದು 7ನೇ ಅಧಿಸೂಚನೆಯಾಗಿದೆ. ಈ ಅಧಿಸೂಚನೆ ಜಾರಿಗೊಂಡಲ್ಲಿ ಘೋಷಿತ ಗ್ರಾಮಗಳ ಜನರಿಗೆ ಅಸಹನೀಯ ಪರಿಸ್ಥಿತಿ ಎದುರಾಗಲಿದೆ. ಇದನ್ನು ಮನಗಂಡು ಅಧಿಸೂಚನೆಯ ಜಾರಿಯನ್ನು ಪಶ್ಚಿಮ ಘಟ್ಟಗಳ ರೈತರು ಗ್ರಾಮಸ್ಥರು ಮತ್ತು ಇತರೆ ನಾಗರಿಕರು ಸಹಕಾರಿಗಳು ಸಂಸ್ಥೆಗಳು ತೀವ್ರವಾದ ವಿರೋಧವನ್ನು ಪ್ರಕಟಿಸಿದೆ ಎಂದರು.

ರೈತ ಸಂಘಟನೆಗಳ, ವಿವಿಧ ಚುನಾಯಿತ ಸಂಸ್ಥೆಗಳ ಪ್ರತಿನಿಧಿಗಳ, ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯವನ್ನು ಪಡೆಯದೇ, ಏಕ ಪಕ್ಷಿಯ ತೀರ್ಮಾನ ಕೈಗೊಂಡಿರುವುದಕ್ಕೆ ವಿರೋಧವಿದೆ. ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ 136 ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿದೆ. ಅಲ್ಲದೇ ಘೋಷಿತ ಗ್ರಾಮದ 10 ಕಿ.ಮೀ. ದೂರದ ವರೆಗೂ ಸೂಕ್ಷ್ಮ ವಲಯದ ನಿಯಮಗಳು ಜಾರಿಯಾಗಲಿವೆ. ಬಹುತೇಕ ಇಲ್ಲಿನ ನಿವಾಸಿಗಳು ಬದಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಪಕ್ಷಾತೀತವಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದ ಅವರು, ಆಗಸ್ಟ್ 29ರ ಪಾದಯಾತ್ರೆಗೆ ಹೆಚ್ಚಿನ ಜನರು ಆಗಮಿಸಿ ಬೆಂಬಲ ಸೂಚಸಬೇಕೆಂದು ಅವರು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ್ ಕಳೂರು ಸಹಕಾರ ಬ್ಯಾಂಕ್ ಅಧ್ಯಕ್ಷ ಡಿ.ಆರ್. ವಿನಯಕುಮಾರ್ ಬಿಜೆಪಿ ಜಿಲ್ಲಾ ಮುಖಂಡ ಬೆಳ್ಳೂರು ತಿಮ್ಮಪ್ಪ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ವಿ ಮಲ್ಲಿಕಾರ್ಜುನ್ ಶೋಧ ಸಂಘಟನೆಯ ಅಧ್ಯಕ್ಷ ಪುರುಷೋತ್ತಮ ಬೆಳ್ಳಕ್ಕ, ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲ್ ಪ್ರಮುಖರಾದ ಮುಡಬಾಗಿಲು ರಮಾನಂದ ವಿನಾಯಕ ಅರೆಮನೆ, ಜಿ.ಇ.ಮುರಳೀಧರ ಮತ್ತಿತರರು ಇದ್ದರು.

