ಪಿಯು ಕಾಲೇಜು ಉಪನ್ಯಾಸಕರ ಕಾರ್ಯಗಾರ | ಉಪನ್ಯಾಸಕರುಗಳಿಗೆ ಸಮಯ ಪಾಲನೆ ಮತ್ತು ಶಿಸ್ತು ಅಗತ್ಯ ; ಚಂದ್ರಪ್ಪ ಗುಂಡಪಲ್ಲಿ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಇಂದಿನ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯಗಳನ್ನು ಪರಿಶೀಲಿಸುತ್ತಾರೆ, ಉಪನ್ಯಾಸಕರುಗಳು ಸಮಯ ಪಾಲನೆ ಮತ್ತು ಶಿಸ್ತು ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ಅದನ್ನು ಪಾಲಿಸುತ್ತಾರೆ ಹಾಗೆಯೇ ಕಾಲೇಜಿನ ಉತ್ತಮ ಫಲಿತಾಂಶಕ್ಕೆ ಕಾರಣಭೂತರಾಗುತ್ತಾರೆ ಎಂದು ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅಮೃತ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೊಸನಗರ ತಾಲೂಕು ಉಪನ್ಯಾಸಕರ ಸಂಘ ಹಾಗೂ ಪ್ರಾಚಾರ್ಯರ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಉಪನ್ಯಾಸಕರ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಪನ್ಯಾಸಕರುಗಳು ಹೆಚ್ಚು ಹೆಚ್ಚು ಅಧ್ಯಯನ ಮಾಡುವುದರ ಮೂಲಕ ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ಅದನ್ನು ಮಕ್ಕಳಿಗೆ ತಿಳಿಸಿದಾಗ ಮಕ್ಕಳು ಆ ವಿಷಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಾರೆ.
ಉಪನ್ಯಾಸಕರು ಸಮಯ ಪಾಲನೆ ಶಿಸ್ತು, ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸಿದಾಗ ವಿದ್ಯಾರ್ಥಿಗಳು ಆ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಉನ್ನತ ಶಿಕ್ಷಣವನ್ನು ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಹಿರಿಯ ಉಪನ್ಯಾಸಕರುಗಳು ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಯ ಕುರಿತು ಉಪನ್ಯಾಸಕರು ತೆಗೆದುಕೊಳ್ಳಬೇಕಾದ ಕ್ರಮಗಳು ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ 100ಕ್ಕೆ 100ರಷ್ಟು ಫಲಿತಾಂಶವನ್ನು ವಿಷಯವಾರು ಉಪನ್ಯಾಸಕರುಗಳಿಗೆ ಹಾಗೂ 100ಕ್ಕೆ 100 ಅಂಕಗಳನ್ನು ಪಡೆದ ವಿಷಯಗಳ ಉಪನ್ಯಾಸಕರುಗಳಿಗೆ ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತ ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ನಜ್ಹತ್ ಉಲ್ಲಾ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಸಂಘದ ಅಧ್ಯಕ್ಷ ಪಂಡರಿನಾಥ್, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್. ಯೋಗೀಶ್, ಜಿಲ್ಲೆಯ ಹಾಗೂ ತಾಲ್ಲೂಕಿನಿಂದ ಆಗಮಿಸಿದ ಪ್ರಾಚಾರ್ಯಗಳಾದ ವಾಸುದೇವ್, ಶ್ರೀನಿವಾಸ್ ನಾಯ್ಕ, ಕೃಷ್ಣಮೂರ್ತಿ, ಸಿಸ್ಟೆರ್ ಐರಿನ್, ಗೀತಾ ಬಾಲಚಂದ್ರ, ಜಿಲ್ಲಾ ಉಪನ್ಯಾಸಕರ ಸಂಘದ ಘನಶಾಮ್, ಮಲ್ಲಿಕಾರ್ಜುನ, ದಿನಕರ್, ದಾಮೋದರ್ ಶೆಣೈ, ಹೊಸನಗರ ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಹಾಲಪ್ಪ ಸಂಕೂರ್ ಇನ್ನಿತರರಿದ್ದರು.

ಉಪನ್ಯಾಸಕರಾದ ಸುಜಯ್ ನಾಡಿಗ್ ಪ್ರಾರ್ಥಿಸಿದರು. ನಿಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಗಣೇಶ್ ಸ್ವಾಗತಿಸಿ, ಫ್ರಾನ್ಸಿಸ್ ಬೆಂಜಾಮಿನ್ ನಿರೂಪಿಸಿ, ರಾಜೇಶ್ ಬೋಳಾರ್ ವಂದಿಸಿದರು.

Leave a Comment