ಏ.3 ರಿಂದ 8 ರವರೆಗೆ ರಾಮೋತ್ಸವ | ರಾಮಚಂದ್ರಾಪುರ ಮಠದಲ್ಲಿ ರಾಮನ ಅನುಪಮ ಉಪಾಸನೆ

Written by malnadtimes.com

Published on:

ಹೊಸನಗರ ; ಮಲೆನಾಡ ನಡುಮನೆ ಹೊಸನಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ರಾಮಚಂದ್ರಾಪುರ ಮಠದಲ್ಲಿ ಶ್ರೀರಾಮನ ಅನುಪಮ ಉಪಾಸನೆಯ ಮತ್ತೊಂದು ಸಂಭ್ರಮದ ಮಹೋತ್ಸವ ಮಾ. 30 ರಿಂದ ಆರಂಭಗೊಳ್ಳಲಿದೆ.

WhatsApp Group Join Now
Telegram Group Join Now
Instagram Group Join Now

ವಿಶ್ವಾವಸು ಸಂವತ್ಸರದ ವಿಶೇಷ ರಾಮೋತ್ಸವ ಕಾರ್ಯಕ್ರಮಗಳು ಏ. 3 ರಿಂದ 8 ರವರೆಗೆ ಜರುಗಲಿದೆ. ರಾಮೋತ್ಸವದ ಎಲ್ಲ ಕಾರ್ಯಕ್ರಮಗಳಿಗೂ ಶ್ರೀಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ದಿವ್ಯ ಮಾರ್ಗದರ್ಶನ ನೀಡಲಿದ್ದಾರೆ. ಇಲ್ಲಿ ನಡೆಯಲಿರುವ ರಾಮೋತ್ಸವ ಕಾರ್ಯಕ್ರಮದ ವಿಶೇಷವೇ ಇದು.

ತ್ರೇತಾಯುಗದ ಅವತರಣಗಳ ವಿಭಿನ್ನ ಕಲ್ಪನೆಯೊಂದಿಗೆ ಮೂಡಿಬರಲಿರುವ ರಾಮೋತ್ಸವ ಲೌಕಿಕ ಜೀವನದ ರಾವಣತ್ವಗಳ ವಿನಾಶಕ್ಕೆ ರಾಮನ ಆದರ್ಶದ ಪ್ರಾಮುಖ್ಯತೆ ಸಾರುವ ಉತ್ಕೃಷ್ಟ ಉದ್ದೇಶ ಹೊಂದಿದೆ.

ಇಲ್ಲಿ ಈ ಹಿಂದೆ ನಡೆದ ಐತಿಹಾಸಿಕ ರಾಮಾಯಣ ಮಹಾಸತ್ರ ಮತ್ತು ವಿಶ್ವದ ಗಮನ ಸೆಳೆದ ವಿಶ್ವ ಗೋಸಮ್ಮೇಳನ ರಾಷ್ಟ್ರದಲ್ಲಿ ತನ್ನದ್ದೇಯಾದ ಮೈಲಿಗಲ್ಲು ಸ್ಥಾಪಿಸಿರುವುದು ಈಗ ಇತಿಹಾಸ.

ಸಂಸ್ಕಾರಯುತ ಸಮಾಜ ನಿರ್ಮಾಣದ ಹಿನ್ನೆಲೆಯಲ್ಲಿ ಆಧ್ಯಾತ್ಮಿಕವಾದ ವಿಚಾರಗಳು ಕನ್ನಡಿಯಾಗಲಿದೆ ಎಂಬ ಚಿಂತನೆಯನ್ನು ಒಳಗೊಂಡ ಹತ್ತು ಹಲವು ಕಾರ್ಯಕ್ರಮಗಳು ಈ ವೇಳೆ ಇಲ್ಲಿ ಜರುಗಲಿದೆ.

ಈ ಹಿಂದೆ ಕಾರ್ಯಕ್ರಮಗಳಿಗೆ ಆಹ್ವಾನಿಸುವ ಅಕ್ಷತಾಭಿಯಾನ ಎಂಬ ವಿಶಿಷ್ಟ ಇತಿಹಾಸ ಸೃಷ್ಟಿಸಿರುವ ಮಠ ತನ್ನ ವ್ಯಾಪ್ತಿಯ ಎಲ್ಲ ವಿಶೇಷ ಕಾರ್ಯಕ್ರಮಗಳಿಗೆ ಮನೆಮನೆಗೂ ಅಕ್ಷತೆಯನ್ನು ಕೊಟ್ಟು ಕರೆಯುವ ಪದ್ದತಿ ರೂಢಿಸಿಕೊಂಡು ಬಂದಿದ್ದು ಈಗಲೂ ಕೆಲಭಾಗದಲ್ಲಿ ಇದು ನಡೆದಿದೆ. ಹಿಂದೆ ರಾಮಾಯಣ ಮಹಾ ಸತ್ರದಿಂದ ಮೊದಲಗೊಂಡು ಈ ರೀತಿಯ ಪದ್ದತಿಯನ್ನು ಇಲ್ಲಿನ ಬಹುತೇಕ ಕಾರ್ಯಕ್ರಮಗಳಲ್ಲಿ ಚಾಚೂ ತಪ್ಪದೆ ನಡೆಸಿಕೊಂಡು ಬಂದಿರುವುದು ಶ್ರೀಮಠದ ವಿಶೇಷ. ಮಠದ ಮಾತೃ ವಿಭಾಗದ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತ ಬಂದಿದೆ.

ಇನ್ನು ಏ. 5 ರಂದು ಉದ್ಘಾಟನೆಗೊಳ್ಳುವ ಅಖಂಡ ಭಜನೆ ಆಹೋರಾತ್ರಿ ನಿಮಿಷವೂ ನಿಲ್ಲದೆ ಏ. 7 ರವರೆಗೆ ನಡೆಯುತ್ತದೆ. ವಿವಿಧ ಮಂಡಲಗಳಿಂದ ಬರುವ ಭಜನಾ ತಂಡಗಳು ರಾಮ ಭಜನೆಯ ಮೂಲಕ ರಾಮೋತ್ಸವಕ್ಕೆ ಕಳೆ ಕಟ್ಟಲಿದ್ದಾರೆ.

ಉತ್ತರ ಭಾರತದಲ್ಲಿ ಮಾತ್ರ ಕಂಡು ಬರುವ ರಾಮಲೀಲಾ ರಾವಣ ದಹನ ಕಾರ‍್ಯಕ್ರಮ ಪ್ರತಿ ವರ್ಷದ ಹೈಲೈಟ್. ಸಹಸ್ರಾರು ಜನರು ಇದನ್ನು ವೀಕ್ಷಿಸುವುದಕ್ಕೆ ಆಗಮಿಸಲಿದ್ದಾರೆ. ಈ ಬಾರಿ ಏ. 6 ರ ರಾತ್ರಿ ರಾಮಲೀಲಾ ನಡೆಯಲಿದೆ.

ಕಾರ‍್ಯಕ್ರಮಗಳು ;

  • ಮಾ. 30 ಶ್ರೀ ವಾಲ್ಮೀಕಿ ರಾಮಾಯಣ ಪಾರಾಯಣ ಆರಂಭ.
  • ಏ. 1 ರಂದು ವೇದ ಪಾರಾಯಣ ಆರಂಭ.
  • ಏ. 3 ರಂದು ಶಿಬಿಕ ಯಂತ್ರೋತ್ಸವ.
  • ಏ. 4 ರಂದು ಗರುಡೋತ್ಸವ. ಸಂಜೆ ಶ್ರೀ ಗುರುಗಳ ಆಗಮನ, ದೀಪಮಾಲಿಕೆ ಕಾರ‍್ಯಕ್ರಮ.
  • ಏ. 5 ಪುಷ್ಪರಥೋತ್ಸವ, ಅಖಂಡ ಭಜನೆ, ಪೂಗ ಪೂಜೆ.
  • ಏ. 6 ರಂದು ಶ್ರೀರಾಮಜನ್ಮೋತ್ಸವ, ಶ್ರೀಮನ್ಮಹಾರಥೋತ್ಸವ, ಧಾರ್ಮಿಕ ಸಭೆ, ನಂತರ ತ್ರೇತೆಯ ಕಲ್ಪನೆಯಲ್ಲಿಯೇ ವಿಶೇಷ ದಿಬ್ಬಣದೊಂದಿಗೆ ಸೀತಾ ಕಲ್ಯಾಣೋತ್ಸವ, ರಾತ್ರಿ 8 ಕ್ಕೆ ರಾವಣ ದಹನ ರಾಮಲೀಲಾ.
  • ಏ.7 ರಂದು ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ ಭಜನಾ ಮಂಗಲ
  • ಏ. 8 ರ ಅಂಕುರ ಪ್ರಸಾದ ವಿತರಣೆಯೊಂದಿಗೆ ರಾಮೋತ್ಸವ ಸಂಪನ್ನಗೊಳ್ಳಲಿದೆ.

Leave a Comment