ರಿಪ್ಪನ್‌ಪೇಟೆ ; ಜಾತಿ, ವರ್ಗ, ವರ್ಣ, ಭೇದ, ಭಾವನೆ ಇಲ್ಲದೆ ಮಾಡುವ ಧಾರ್ಮಿಕ ಸೇವೆಯಿಂದಾಗಿ ಸಮಾಜದ ಸಂಘಟನೆಗೆ ಸಹಕಾರಿಯಾಗಿದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.
ಎಣ್ಣೆನೋಡ್ಲು ಗ್ರಾಮದ ಶ್ರೀಸಿದ್ದೇಶ್ವರ ಸೇವಾ ಸಮಿತಿಯವರು ಏರ್ಪಡಿಸಲಾಗಿರುವ ಶ್ರೀಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಕ್ಷೇತ್ರಪಾಲ ದೇವರ ಹಾಗೂ ನಾಗದೇವರ ಪ್ರತಿಷ್ಠಪನಾ ಮತ್ತು ಪರಿವಾರ ದೇವರುಗಳ ಪ್ರತಿಷ್ಟಾಪನಾ ಕಾರ್ಯಕ್ರಮ ಹಾಗೂ ಧರ್ಮ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ, ಧಾರ್ಮಿಕ ಆಚರಣೆಯಿಂದ ಸಮಾಜದ ಶ್ರೇಯೋಭಿವೃದ್ದಿ ಸಾಧ್ಯವೆಂದ ಶ್ರೀಗಳು, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದರೊಂದಿಗೆ ಸುಸಂಸ್ಕೃತರನ್ನಾಗಿ ಮಾಡುವ ಗುರುತರ ಹೊಣೆಗಾರಿಕೆ ಪೋಷಕರದ್ದಾಗಿದೆ. ದೇವರನ್ನು ಭಕ್ತಿಯಿಂದ ಪೂಜಿಸಿ ಪ್ರಾರ್ಥಿಸುವಂತಾಗಬೇಕು. ತಂದೆ-ತಾಯಿಯವರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳವುದರೊಂದಿಗೆ ಅವರನ್ನು ವೃದ್ದಾಶ್ರಮಗಳಲ್ಲಿ ಬಿಡದೆ ಅವರ ಪಾಲನೆ, ಪೋಷಣೆಯನ್ನು ಮಾಡಿದರೆ ಸಾಕು ನಿಮಗೆ ಪುಣ್ಯ ಪ್ರಾಪ್ತಿಯಾಗುವುದೆಂದು ಹೇಳಿ, ಇಲ್ಲಿನ ಸಿದ್ದೇಶ್ವರ ಸ್ವಾಮಿಯಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಸಾಕು ತಮ್ಮ ಬೇಡಿಕೆ ಫಲಿಸುವ ಪವಾಡ ಶಕ್ತಿ ಸಿದ್ದೇಶ್ವರ ಸ್ವಾಮಿಯಲ್ಲಿದೆ ಎಂದರು.

ಧರ್ಮಸಭೆಯ ಅಧ್ಯಕ್ಷತೆಯನ್ನು ಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿ ಆಧ್ಯಕ್ಷ ಕೆರಗೋಡು ಪರಮೇಶಪ್ಪ ವಹಿಸಿದ್ದರು. ಧರ್ಮಸಭೆಯಲ್ಲಿ ನಾಗೇಂದ್ರಪ್ಪಗೌಡರು ಹುಳಿಗದ್ದೆ, ಜಯಪ್ಪ, ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಪರಮೇಶ್ವರಪ್ಪಗೌಡ ಕೆರಗೋಡು, ನಾಗೇಂದ್ರಪ್ಪಗೌಡ, ಪರಮೇಶ್ವರಪ್ಪ ಹುಳಿಗದ್ದೆ, ರೂಪಾಧರಗೌಡ, ಶಿವಣ್ಣಗೌಡ, ಲೋಕೇಶ ನೆಣೆಬಸ್ತಿ, ಕಿಟ್ಟಣ್ಣ, ದುಂಡರಾಜ್ ಹುಳಿಗದ್ದೆ, ಯೋಗಾಶನದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಯುವ ಪ್ರತಿಭೆ ಕು. ಕಾವ್ಯ ಹಾಗೂ ಕಾರ್ಮಿಕರ ಸಂಘದ ಸದಸ್ಯರುಗಳಿಗೆ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.
ಜಾಹ್ನವಿ ಶಿವಪುರ ಪ್ರಾರ್ಥಿಸಿದರು. ಸುಮಂತ್ ಶಿವಪುರ ಸ್ವಾಗತಿಸಿದರು. ಸಿದ್ದೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿನೇಶ ಕಲ್ಲುಕೊಪ್ಪ ವಂದಿಸಿದರು.

ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿಗಳ ದಿವ್ಯಸಾನ್ನಿಧ್ಯದಲ್ಲಿ ಹಾದಿಗಲ್ಲು ಶಂಕರಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಶ್ರೀಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಕ್ಷೇತ್ರಪಾಲ ದೇವರ ಹಾಗೂ ನಾಗದೇವರ ಪ್ರತಿಷ್ಠಪನೆ ಮತ್ತು ಪರಿವಾರ ದೇವರುಗಳ ಪ್ರತಿಷ್ಟಾಪನೆ ಉಚ್ಚಾಟನೆ ಹೋಮ, ಕ್ಷೇತ್ರ ಪಾಲ ಪ್ರತಿಷ್ಟಾಪನೆ ಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಂತರ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಂತರ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.