ರಿಪ್ಪನ್‌ಪೇಟೆ ; ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಟಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ 58ನೇ ವರ್ಷದ ಗಣೇಶಮೂರ್ತಿಯ ವಿಸರ್ಜನೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ ವಿಸರ್ಜನ ಪೂಜೆಯು ಮಧ್ಯಾಹ್ನ 12.30 ಕ್ಕೆ ಸಮಿತಿಯ ಪದಾಧಿಕಾರಿಗಳ ಮತ್ತು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆಯೊಂದಿಗೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಿತು.

ರಾಜಬೀದಿ ಉತ್ಸವಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಯಲ್ಲಿ ಪೊಲೀಸ್ ಕವಾಯಿತ್ ಹಾಗೂ ಹಿಂದೂ ಸಂಘಟನೆಗಳ ಬೈಕ್ ರ‍್ಯಾಲಿ ನಡೆಯಿತು. ನಂತರ ಮಧ್ಯಾಹ್ನ 5:45 ಗಂಟೆ ಸಮಯದಲ್ಲಿ ರಾಜಬೀದಿ ಉತ್ಸವದ ಮೆರವಣಿಗೆ ಚಾಲನೆ ನೀಡಿದರು.






ರಾಜಬೀದಿ ಉತ್ಸವಕ್ಕೆ ಹಿಂದೂ ಮಹಾಸಭಾದ ಆಧ್ಯಕ್ಷ ಸುಧೀರ್ ಪಿ ಮತ್ತು ಕಾರ್ಯದರ್ಶಿ ಮುರುಳಿಧರ ಕೆರೆಹಳ್ಳಿ ಚಾಲನೆ ನೀಡುತ್ತಿದ್ದಂತೆ ಗಣೇಶ ಉತ್ಸವವು ಆರಂಭಗೊಂಡು ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದ ಮಾರ್ಗವಾಗಿ ಶಿವಮೊಗ್ಗ ರಸ್ತೆಯ ಹೊರಟಿತು. ರಾಜಬೀದಿ ಉತ್ಸವದಲ್ಲಿ ನಾಡಿನ ಹೆಸರಾಂತ ಜಾನಪದ ಕಲಾ ತಂಡಗಳ ಡೊಳ್ಳು ಕುಣಿತ, ತಮಟೆ ಬಡಿತ, ಕೇರಳದ ನವಿಲು ನೃತ್ಯ, ಭದ್ರಾವತಿ ಅರಕೆರೆಯ ವೀರಗಾಸೆ, ಶಿಗ್ಗಾಂವ್, ಜಾಂಜಾ ಪಥಾಕ್, ಕೀಲು ಕುದುರೆ, ಗೊಂಬೆಕುಣಿತ, ನಗಾರಿ ಹಾಗೂ ತಟ್ಟಿರಾಯ, ಪ್ರದರ್ಶನ ಜನಾಕರ್ಷಣೆಗೊಂಡಿತು.

ಇದರೊಂದಿಗೆ ಡಿಜೆ ಬಳಕೆಗೆ ನಿಷೇಧ ಹೇರಿದ್ದರಿಂದ ಅಷ್ಟಾಗಿ ಅಬ್ಬರ ಕಂಡುಬರದಿದ್ದರೂ ಕೂಡಾ ಕೆಲವಡೆ ಧ್ವನಿವರ್ಧಕದಂತಹ ಪರ್ಯಾಯ ವ್ಯವಸ್ಥೆಯೊಂದಿಗೆ ಮೆರವಣಿಗೆಯಲ್ಲಿ ಹಾಡುಗಳನ್ನು ಹಾಕಿಕೊಂಡು ಸ್ಥಳೀಯ ಯುವಕ-ಯುವತಿಯರು ಮಕ್ಕಳು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದು ಇನ್ನೂ ಉತ್ಸವದ ಮೆರವಣಿಗೆಗೆ ಮೆರಗು ನೀಡಿತು.

ಶಿವಮೊಗ್ಗ ರಸ್ತೆಯಿಂದ ವಿನಾಯಕ ವೃತ್ತಕ್ಕೆ ಬರುತ್ತಿದ್ದಂತೆ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಯವತಿಯಿಂದ ಶ್ರೀಸ್ವಾಮಿಗೆ ಮಾಲಾರ್ಪಣೆ ಮಾಡಿ ಧನ್ಯರಾದರು. ನಂತರ ವಿನಾಯಕ ವೃತ್ತದಲ್ಲಿ ದಕ್ಷಿಣಕನ್ನಡ ಮತ್ತು ಉಡುಪಿಯ ಸರಗಮ್ ಮ್ಯೂಸಿಕಲ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು ಉತ್ಸವವು ಶಿವಮೊಗ್ಗ-ತೀರ್ಥಹಳ್ಳಿ-ಸಾಗರ ರಸ್ತೆಯಲ್ಲಿ ತೆರಳಿ ನಂತರ ಭಾನುವಾರ ಬೆಳಗ್ಗೆ ಹೊಸನಗರ ರಸ್ತೆಯ ಮೂಲಕ ಗವಟೂರು ಬಳಿಯ ತಾವರೆಕೆರೆಯಲ್ಲಿ ಜಲಸ್ತಂಭನಗೊಳ್ಳಲಿದೆ.


ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಾಗರ ಉಪವಿಭಾಗಾಧಿಕಾರಿಗಳು ಹೊಸನಗರ ತಹಸೀಲ್ದಾರ್ ರಶ್ಮಿಹಾಲೇಶ್, ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ, ವೃತ್ತನಿರೀಕ್ಷಕ ಗುರಣ್ ಹೆಬ್ಬಾಳ್, ಪಿಎಸ್‌ಐ ರಾಜುರೆಡ್ಡಿ ಸೇರಿದಂತೆ ಕೆಎಸ್‌ಆರ್‌ಪಿ ಮತ್ತು ಡಿ.ಆರ್ ತುಕಡಿಗಳು ಪೊಲೀಸ್ ಇಲಾಖೆಯವರು ಹಾಗೂ ಗೃಹರಕ್ಷಕ ದಳ ಸೇರಿದಂತೆ 300ಕ್ಕೂ ಅಧಿಕ ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

ಹಿಂದೂ ಮಹಾಸಭಾವತಿಯಿಂದ ಬೈಕ್ ರ‍್ಯಾಲಿ
ರಿಪ್ಪನ್‌ಪೇಟೆ ; ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಟಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ 58ನೇ ವರ್ಷದ ಗಣೇಶಮೂರ್ತಿಯ ವಿಸರ್ಜನೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ ರಾಜಬೀದಿ ಉತ್ಸವಕ್ಕೂ ಮುನ್ನ ಹಿಂದೂ ಮಹಾಸಭಾದವತಿಯಿಂದ ಯುವಕರು ನೂರಾರು ಬೈಕ್‌ಗಳೊಂದಿಗೆ ರ‍್ಯಾಲಿ ನಡೆಸಿದರು.

ಬೈಕ್ ರ‍್ಯಾಲಿಗೆ ಹಿಂದೂ ಮಹಾಸಭಾದ ಅಧ್ಯಕ್ಷ ಸುಧೀರ್ ಪಿ ಮತ್ತು ಹಿರಿಯ ಮುಖಂಡ ಎಂ.ಬಿ.ಮಂಜುನಾಥ ಹಿಂದೂ ಧ್ವಜವನ್ನು ಎತ್ತಿ ಹಿಡಿಯುವ ಮೂಲಕ ಚಾಲನೆ ನೀಡಿದರು.

ರ‍್ಯಾಲಿಯು ಸಿದ್ದಿವಿನಾಯಕ ದೇವಸ್ಥಾನದಿಂದ ಹೊರಟು ಶಿವಮೊಗ್ಗ-ತೀರ್ಥಹಳ್ಳಿ-ಹೊಸನಗರ-ಸಾಗರ ರಸ್ತೆಯ ಮೂಲಕ ವಿದ್ಯಾನಗರ ಮಾರ್ಗವಾಗಿ ದೇವಸ್ಥಾನದ ಬಳಿ ತಲುಪಿತು.


ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.